ಎಚ್ ಡಿ ದೇವೇಗೌಡಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
PC: X/narendramodi
ಬೆಂಗಳೂರು: ಪ್ರಧಾನಿ ನನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅನಾರೋಗ್ಯ ನಿಮಿತ್ತ ಜೂನ್ 9ರಂದು ನಡೆದ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಎಚ್.ಡಿ ದೇವೇಗೌಡ ಅವರು ಗೈರಾಗಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಚ್.ಡಿ ದೇವೇಗೌಡ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ, ಹೊಸ ಸರ್ಕಾರದ ಬಗ್ಗೆ ತಮಗೆ ಇರುವ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಹಾಗೆ ನನ್ನ ಆರೋಗ್ಯವನ್ನೂ ವಿಚಾರಿಸಿದರು. ಅವರ ಕಾಳಜಿಗೆ ನಾನು ಆಭಾರಿ. ಅವರ ಈ ಕಾಳಜಿ ನನ್ನನ್ನು ಭಾವುಕರನ್ನಾಗಿಸಿತು. ದೇವರ ಆಶೀರ್ವಾದ ಸದಾ ಅವರ ಮೇಲೆ ಇರಲಿ. ಅವರು ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ' ಎಂದು ಬರೆದುಕೊಂಡಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮಕ್ಕೂ ಮೊದಲು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ದೇವೇಗೌಡ ಅವರು, ‘ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿಮಗೆ ಅಭಿನಂದನೆ. ಈ ಐತಿಹಾಸಿಕ ಕ್ಷಣದಲ್ಲಿ ನಾನು ಕೂಡ ಹಾಜರಿರಬೇಕಿತ್ತು. ಅನಾರೋಗ್ಯದ ಕಾರಣದಿಂದ ಸಾಧ್ಯವಿಲ್ಲ. ನಮ್ಮ ಪಕ್ಷವು ಎನ್ ಡಿಎ ಮೈತ್ರಿಕೂಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ‘ಎಲ್ಲರೊಂದಿಗೆ ಎಲ್ಲರ ವಿಕಾಸ’ ಎಂಬ ಘೋಷ ವಾಕ್ಯದಂತೆ ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದರು.
PM Shri @narendramodi avaru called me to share his thoughts and ideas on the new government. He enquired after my health too. I am grateful for his care and concern. His warmth made me emotional. May the almighty’s blessings always be on him. May he lead India to greater glory.
— H D Deve Gowda (@H_D_Devegowda) June 10, 2024