ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ಮೋದಿ ಇದುವರೆಗೆ ಸಮಯ ನಿಗದಿ ಮಾಡಿಲ್ಲ: ಸಚಿವ ಚಲುವರಾಯಸ್ವಾಮಿ ಅಸಮಾಧಾನ
ಕಾವೇರಿ ಜಲ ವಿವಾದ
ಮಂಡ್ಯ, ಸೆ.5: ಕಾವೇರಿ ವಿಚಾರ ಸಂಬಂಧ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯವಕಾಶ ಕೋರಿದ್ದೇವೆ. ಆದರೆ, ಅವರು ಇದುವರೆಗೆ ಸಮಯ ನಿಗದಿ ಮಾಡಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುಗಡೆ ವಿರುದ್ಧಕ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸೋಮವಾರ ಭೇಟಿಯಾಗಿ ಮಾತನಾಡಿದ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುದರಿಂದ ಪ್ರಧಾನಿಯವರ ಭೇಟಿ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದ 28 ಸಂಸದರು, ರಾಜ್ಯಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕಾಗಿದೆ. ಸಂಸದರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅವರು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ತಮಿಳುನಾಡು ಪ್ರತಿನಿತ್ಯ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಮೊರೆ ಹೋಗಿದೆ. ನಮ್ಮ ಸರಕಾರ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಬಂದಿದ್ದು, ನೀರು ಬಿಡುವ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ವೋಚ್ಛ ನ್ಯಾಯಾಲಯದಲ್ಲಿ ನಾಳೆ ವಿಚಾರಣೆ ನಡೆಯಲಿದ್ದು, ರಾಜ್ಯ ಸರಕಾರ ಸಮರ್ಥವಾದ ಮಂಡನೆಗೆ ಮುಂದಾಗಿದೆ. ತೀರ್ಪು ಹೊರ ಬಂದ ನಂತರ ಚರ್ಚಿಸಿ ಸರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ಹಿತ ಕಾಪಾಡಲು ಸರಕಾರ ಎಲ್ಲಾ ರೀತಿಯಲ್ಲಿಯೂ ಮುಂದಾಗಿದೆ ಎಂದು ಅವರು ಹೇಳಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನ್ಯಾಯಯುತ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ. ಹೋರಾಟದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ, ಈಗ ಮಂತ್ರಿಯಾಗಿದ್ದೇನೆ ಅಷ್ಟೆ. ರಾಜ್ಯವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಮಸ್ಯೆಯನ್ನು ಎದುರಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಸ್ಪಂದಿಸಬೇಕಾಗಿದೆ. ಇದರಲ್ಲಿ ರಾಜಕಾರಣ ಮಾಡುವ ಪ್ರಶ್ನೆ ಬರುವುದಿಲ್ಲ. ಸರಕಾರಕ್ಕೆ ರೈತರ ಹಿತರಕ್ಷಣೆ ಮುಖ್ಯ ಎಂದು ಅವರು ಭರವಸೆ ನೀಡಿದರು.
ಕೆಆರ್ ಎಸ್ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನಾಳೆಯಿಂದ ನಾಲೆಗಳಿಗೆ ಎರಡನೇ ಕಂತಿನ ನೀರು ಹರಿಸಲಾಗುವುದು. ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗೂಡಿ ರೈತರ ರಕ್ಷಣೆಗೆ ಮುಂದಾಗಬೇಕಾಗಿದೆ. ಹೋರಾಟದ ಮೂಲಕ ಕೇಂದ್ರ, ರಾಜ್ಯ ಸರಕಾರದ ಗಮನ ಸೆಳೆಯುತ್ತಿದ್ದು, ನಾಡಿನ ರೈತರಿಗೆ ಒಳಿತಾಗಬೇಕಾಗಿದೆ ಎಂದು ಅವರು ಹೇಳಿದರು.
ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಉಪಸ್ಥಿತರಿದ್ದರು.
ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲುಗಡೆಗೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯದಲ್ಲಿ ನಡೆಸುತ್ತಿರುವ ಮಂಗಳವಾರದ 6ನೇ ದಿನದ ಧರಣಿಯಲ್ಲಿ ರೈತಸಂಘ(ಮೂಲ ಸಂಘಟನೆ), ಇಂಡುವಾಳು ಗ್ರಾಪಂ ವ್ಯಾಪ್ತಿಯ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.