ಬರ ಪರಿಸ್ಥಿತಿ ಕುರಿತು ವಿವರಿಸಲು ಮುಖ್ಯಮಂತ್ರಿಗೆ ಪ್ರಧಾನಿ ಕಾಲಾವಕಾಶ ಕೊಡುತ್ತಿಲ್ಲ: ಸಚಿವ ಎಚ್.ಕೆ. ಪಾಟೀಲ್
“ಕೇಂದ್ರ ಸರಕಾರದ ಧೋರಣೆಗೆ ಸಂಪುಟ ಸಭೆ ಕಳವಳ”
ಸಚಿವ ಎಚ್.ಕೆ. ಪಾಟೀಲ್
ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ವಿವರಿಸಲು ಮುಖ್ಯಮಂತ್ರಿಗೆ ಪ್ರಧಾನಿ ಕಾಲಾವಕಾಶ ಕೊಡುತ್ತಿಲ್ಲ. ರಾಜ್ಯದ ಸಚಿವರನ್ನು ಕೇಂದ್ರ ಸಚಿವರು ಭೇಟಿಯಾಗುತ್ತಿಲ್ಲ. ಬರ ಅಧ್ಯಯನ ಮಾಡಲು ಬಂದಿದ್ದ ಕೇಂದ್ರದ ಅಧಿಕಾರಿಗಳ ತಂಡ ನಾವು ಎಲ್ಲ ಕೊಟ್ಟ ಎಲ್ಲ ಮಾಹಿತಿಯನ್ನು ಒಪ್ಪಿದೆ. ಆದರೂ, ಈವರೆಗೆ ಕೇಂದ್ರದಿಂದ ಒಂದು ನಯಾ ಪೈಸೆ ಬರ ಪರಿಹಾರ ಬಂದಿಲ್ಲ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರದಿಂದಾಗಿ ಎಷ್ಟು ನಷ್ಟ ಆಗಿದೆ, ನಾವು ಎನ್.ಡಿ.ಆರ್.ಎಫ್ ಮಾನದಂಡಗಳ ಪ್ರಕಾರ ಎಷ್ಟು ಪರಿಹಾರ ಕೇಳಿದ್ದೇವೆ ಎಂಬ ಮಾಹಿತಿ ಅವರ ಬಳಿಯಿದೆ. ಆದರೆ, ಈವರೆಗೆ ಅವರಿಂದ ಯಾವುದೆ ಪ್ರತ್ಯುತ್ತರ ಸಿಗಲಿಲ್ಲ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಡಿ ಈಗಾಗಲೆ 100 ದಿನ ಪೂರ್ಣಗೊಳಿಸಿರುವ ಕುಟುಂಬಗಳು ಬಹಳಷ್ಟಿವೆ. ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಮಾನವ ದಿನಗಳನ್ನು 150ಕ್ಕೆ ಏರಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು ಎಂದು ಅವರು ಹೇಳಿದರು.
ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ಕಂದಾಯ ಸಚಿವ ಕೃಷ್ಣಬೈರೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಂಬಂಧಪಟ್ಟ ಕೇಂದ್ರ ಸಚಿವರ ಭೇಟಿಗಾಗಿ ದಿಲ್ಲಿಯಲ್ಲಿ ನಾಲ್ಕೈದು ದಿನ ವಾಸ್ತವ ಹೂಡಿ ಸಮಯ ಕೇಳಿದರೂ ಕಾಲಾವಕಾಶ ನೀಡುತ್ತಿಲ್ಲ. ಅವರ ಕಾರ್ಯದರ್ಶಿಗಳಿಗೆ ನಮ್ಮ ಸಚಿವರು ಮನವಿ ಪತ್ರ ಸಲ್ಲಿಸಿ ಬರುವಂತಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಸಂಪುಟ ಸಭೆಯಲ್ಲಿ ತೀವ್ರ ಅಭಿಪ್ರಾಯ ವ್ಯಕ್ತವಾಗಿದೆ. ಮಾನವ ದಿನಗಳನ್ನು ಹೆಚ್ಚಿಸಲು ತಕ್ಷಣ ನಿರ್ಣಯ ತೆಗೆದುಕೊಳ್ಳಬೇಕು. ಜನರಿಗೆ ಕೆಲಸ ಕೊಡುವಲ್ಲಿ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಅವರು ಹೇಳಿದರು.
ಬರ ಪರಿಹಾರ ಕಾಮಗಾರಿಗಳ ಬಗ್ಗೆ ಎಚ್ಚರ ವಹಿಸಿ: ಬರಪರಿಹಾರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೆ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಸೋಮವಾರ, ಮಂಗಳವಾರ, ಬುಧವಾರದ ವೇಳೆಗೆ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳು ಆಗಬೇಕು. ಎಲ್ಲ ತಾಲೂಕುಗಳಲ್ಲಿ ಬರಪರಿಹಾರ ಕುರಿತು ಸಭೆಗಳನ್ನು ಮಾಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಬರ ಪರಿಹಾರ ಕಾಮಗಾರಿಗಳನ್ನು ವೀಕ್ಷಿಸಬೇಕು, ಅಗತ್ಯ ಕಾಮಗಾರಿಗಳನ್ನು ಪ್ರಾರಂಭ ಆಗುವಂತೆ ಮಾಡಬೇಕು. ಪ್ರಮುಖವಾಗಿ ಉದ್ಯೋಗ ಖಾತರಿ ಯೋಜನೆ ಮೇಲೆ ನಿಗಾ ಇಡಬೇಕು. 700-800 ಕೋಟಿ ರೂ.ಗಳಷ್ಟು ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇದೆ. ಮೇವು ಸಂಗ್ರಹ, ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೆ ಅಡ್ಡಿ ಆಗದಂತೆ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಇನ್ಪುಟ್ ಸಬ್ಸಿಡಿ ಬಿಡುಗಡೆ ಬಗ್ಗೆ ಕಾರ್ಯಕ್ರಮ ರೂಪಿಸಲು ಕೃಷಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.4 ರಿಂದ 15ರವರೆಗೆ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.