ಪೋಕ್ಸೋ ಪ್ರಕರಣ | ಯಡಿಯೂರಪ್ಪ ಬಂಧನಕ್ಕೆ ನಿರ್ದೇಶನ ಕೋರಿ ಸಂತ್ರಸ್ತೆಯ ಅಣ್ಣನಿಂದ ಹೈಕೋರ್ಟ್ಗೆ ರಿಟ್ ಅರ್ಜಿ
PC: PTI
ಬೆಂಗಳೂರು : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ಕೋರಿ ಸಂತ್ರಸ್ತೆಯ ಅಣ್ಣ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮಾ.14ರಂದು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರೂ ಪ್ರಕರಣದಲ್ಲಿ ಇದುವರೆಗೂ ಯಾವುದೇ ರೀತಿಯ ಪ್ರಗತಿ ಆಗಿಲ್ಲ ಎಂದು ಆರೋಪಿಸಲಾಗಿದ್ದು, ಹೈಕೋರ್ಟ್ನ ಹಿರಿಯ ವಕೀಲ ಬಾಲನ್ ಮೂಲಕ ಸಂತ್ರಸ್ತೆಯ ಅಣ್ಣ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ದೂರು ನೀಡಿ ಮೂರು ತಿಂಗಳು ಕಳೆದರೂ ಪಂಚನಾಮೆ, ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಅಲ್ಲದೆ, ಬಿಎಸ್ವೈ ಮಾತನಾಡಿದ ವಿಡಿಯೋ ರೆಕಾರ್ಡಿಂಗ್ ಕೂಡ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಅರ್ಜಿಯ ಬೆನ್ನಲ್ಲೇ ಯಡಿಯೂರಪ್ಪ ಅವರಿಗೆ ಇಂದೇ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು. ಆದರೆ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್ಗೆ ಸಿಐಡಿ ಈಗ 42ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದರೆ ಅರೆಸ್ಟ್ ವಾರೆಂಟ್ ಪಡೆದು ಯಡಿಯೂರಪ್ಪ ಅವರನ್ನು ಸಿಐಡಿ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೆ ಸಂಕಷ್ಟ ಎದುರಾಗಿದೆ.