ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುವುದನ್ನು ಗಂಭೀರವಾಗಿ ಪರಿಗಣಿಸಿ ನ್ಯೂನತೆ ಕಂಡುಬಂದ ಪ್ರಕರಣಗಳ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯು ಮಾರ್ಗಸೂಚಿ ಹೊರಡಿಸಿದೆ.
ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯು ಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಆಯಾ ಪೊಲೀಸ್ ವಲಯ ಹಾಗೂ ಕಮಿಷನರೇಟ್ಗಳ ಶಿಸ್ತು ಪ್ರಾಧಿಕಾರಿಗಳಿಗೆ ಮಾರ್ಗಸೂಚಿ ಅನುಸರಿಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಐಜಿ ಕಲಾ ಕೃಷ್ಣಸ್ವಾಮಿ ಆದೇಶಿಸಿದ್ದಾರೆ.
ನಗರ ಕಮಿಷನರೇಟ್ ಹಾಗೂ ಜಿಲ್ಲಾ ಘಟಕಗಳಲ್ಲಿ ಸರಕಾರಿ ಅಭಿಯೋಜಕರು ಒಳಗೊಂಡ ಖುಲಾಸೆಯಾದ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿ ರಚಿಸಲಾಗಿದೆ. ತನಿಖಾ ಪ್ರಕ್ರಿಯೆಯಲ್ಲಿ ಲೋಪ, ಅಭಿಯೋಜನೆಗೆ ಪೂರಕ ಸಾಕ್ಷ್ಯ ನುಡಿಯದಿರುವುದು, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದು ಪ್ರಕರಣಗಳ ವಜಾಕ್ಕೆ ಕಾರಣವಾಗುತ್ತಿದೆ.
ಇದರಿಂದ ಆರೋಪಿಗಳು ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಪ್ರಕರಣಗಳಲ್ಲಿ ತನಿಖೆ ಕೈಗೊಂಡ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ತನಿಖಾಧಿಕಾರಿಗಳಿಂದ ಸಮಜಾಯಿಷಿ ವಿವರ ಪಡೆದು ಪರಿಶೀಲಿಸಿ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿರುವುದು ದೃಢಪಟ್ಟಲ್ಲಿ ಇಲಾಖಾ ತನಿಖೆ ವಿಚಾರಣೆಗಾಗಿ ಶಿಫಾರಸು ಮಾಡಬೇಕು.
ಆಯಾ ವಲಯದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಆಯುಕ್ತರಿಗೆ ನಿರ್ದೇಶಿಸಿಲಾಗಿದೆ. ಡಿವೈಎಸ್ಪಿ ಹಾಗೂ ಇನ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಕರಣ ಕಂಡು ಬಂದರೆ ಪೂರ್ಣ ಪ್ರಮಾಣದ ದಾಖಲಾತಿ ಪ್ರಧಾನ ಕಚೇರಿಗೆ ಬಗ್ಗೆ ಕಳುಹಿಸುವಂತೆ ಸೂಚಿಸಲಾಗಿದೆ.
ಅದೇ ರೀತಿ, ಸಮಿತಿಯ ಶಿಫಾರಸ್ಸಿನಂತೆ ಪೊಲೀಸ್ ಇನ್ಸ್ಪೆಕ್ಟರ್ಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕಾಗಿ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸುವಂತೆಯೂ ಉಲ್ಲೇಖಿಸಲಾಗಿದೆ.