ಸಣ್ಣ ಸಮುದಾಯಗಳಿಗೂ ರಾಜಕೀಯ ಸ್ಥಾನ: ಜಿ.ಪರಮೇಶ್ವರ್
ಬೆಂಗಳೂರು: ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು ಕಾಂಗ್ರೆಸ್ ಪಕ್ಷದ ನೀತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗದ ಜನರಿಗೆ ರಾಜಕೀಯ ಸ್ಥಾನಮಾನ ನೀಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇವೆ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಬೇಡ ಎಂದರು.
ಕೆಲ ಸಮುದಾಯಗಳ ನಾಯಕರು ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಆಗುವುದಿಲ್ಲ. ಅಂತಹ ಸಮುದಾಯವನ್ನು ಗುರುತಿಸಿ ವಿಧಾನ ಪರಿಷತ್, ರಾಜ್ಯಸಭೆ ಹಾಗೂ ಸರಕಾರದಲ್ಲಿ ಇನ್ನಿತರ ಸ್ಥಾನಮಾನಗಳನ್ನು ಕಲ್ಪಿಸುತ್ತಿದ್ದೇವೆ. ಕ್ರಿಶ್ಚಿಯನ್, ಮುಸ್ಲಿಮ್ ಸೇರಿ ಇನ್ನಿತರ ಸಣ್ಣ ಸಮುದಾಯಗಳಿಗೆ ರಾಜಕೀಯ ಸ್ಥಾನ ನೀಡುವ ನಿರಂತರ ಪ್ರಯತ್ನ ಮಾಡುತ್ತಿರುತ್ತೇವೆ ಎಂದು ಹೇಳಿದರು.
ಬಂದೋಬಸ್ತ್: ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಮುನ್ನೆಚ್ವರಿಕೆ ವಹಿಸಿದ್ದಾರೆ. ಈಗಾಗಲೇ ಪೊಲೀಸ್, ಅಗ್ನಿಶಾಮಕ, ಗುಪ್ತದಳ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ಬಿಬಿಎಂಪಿ, ಬಿಎಂಟಿಸಿ ಸೇರಿದಂತೆ ಇನ್ನಿತರ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ಕೆಲವು ನಿರ್ದೇಶನಗಳನ್ನು ನೀಡಿದ್ದೇನೆ. ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ನಗರಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇನ್ನೂ, ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಅವರ ಮೇಲಿನ ಆರೋಪದ ಪ್ರಕರಣವನ್ನು ಡಿಸಿಪಿ ನೇತೃತ್ವದಲ್ಲಿ ಕೂಲಂಕುಷವಾಗಿ ತನಿಖೆ ಕೈಗೊಂಡಿದ್ದಾರೆ. ಕೆ.ಸಿ.ಕಾರಿಯಪ್ಪ ಡ್ರಗ್ಸ್, ಗಾಂಜಾ ಸೇವನೆ ಮಾಡುತ್ತಿದ್ದರು ಎಂದು ದೂರುದಾರ ಮಹಿಳೆ ಮಾಡಿರುವ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.