ಮೋದಿ ಆಡಳಿತಕ್ಕೆ ಜನಮೆಚ್ಚುಗೆ: ಆರ್.ಅಶೋಕ್
ಬೆಂಗಳೂರು: ಮೋದಿಜಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಇದರ ಪರಿಣಾಮ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ರವಿವಾರ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಂಭ್ರಮಪಡುವ ಸುದಿನ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡಗಳಲ್ಲಿ ಪಕ್ಷ ಗೆದ್ದಿದೆ. ನಾಲ್ಕು ರಾಜ್ಯಗಳ ಮತದಾರರಿಗೆ ಧನ್ಯವಾದಗಳು ಎಂದರು.
3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಜನರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಚೀನಾ ಮಾದರಿಯದು ಎಂದು ಜನರಿಗೆ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಮೋದಿ ಆಡಳಿತ ಮಾದರಿ ಎಂದು ಜನರಿಗೆ ಗೊತ್ತಾಗಿದೆ ಎಂದು ತಿಳಿಸಿದರು. ಮೋದಿಯವರನ್ನು ಅಪಶಕುನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆದಿದ್ದಾರೆ. ಅಪಶಕುನ ಯಾರೆಂದು ದೇಶದ ಜನರು ತೀರ್ಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ಅಮಿತ್ ಶಾಜೀ, ಎಲ್ಲ ರಾಜ್ಯಾಧ್ಯಕ್ಷರಿಗೂ ಅಭಿನಂದನೆಗಳು ಎಂದು ಹೇಳಿದರು. ಈ ದೇಶ, ದೇಶದ ಭವಿಷ್ಯ ಯಾರ ಕೈಯಲ್ಲಿದ್ದರೆ ಒಳ್ಳೆಯದೆಂಬ ತೀರ್ಮಾನವನ್ನು ಜನತೆ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು. ಈ ಫಲಿತಾಂಶ ಸಂಭ್ರಮ ತಂದಿದೆ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡಕ್ಕೂ ಹೋಗಿತ್ತು. ಎಲ್ಲೆಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದಿದ್ದರೋ ಅಲ್ಲೆಲ್ಲ ಇವತ್ತು ಕಾಂಗ್ರೆಸ್ ಚೋಡೋ ಆಗಿದೆ ಎಂದು ಎಂದರು.