ಅಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿದೆ.
ಏ.30 ಮಂಗಳವಾರದಂದು ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ನಿರ್ಧಾರದಂತೆ ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಎಸ್ ಐಟಿ ತನಿಖೆಯಲ್ಲಿ ಆರೋಪ ಸಾಬೀತಾದರೆ ಪ್ರಜ್ವಲ್ ಅವರನ್ನು ಪಕ್ಷದಿಂದ ಶಾಶ್ವತವಾಗಿ ಉಚ್ಚಾಟನೆ ಮಾಡಲಾಗುತ್ತದೆ ಎಂದು ಸಭೆ ಬಳಿಕ ಎಚ್ ಡಿಕೆ ಹೇಳಿದ್ದಾರೆ.
ಅಮಾನತುಗೊಳಿಸಿ ಆದೇಶ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಕ್ಷದ ಘನತೆ ಮತ್ತು ಗೌರವಗಳಿಗೆ ಹಾಗೂ ಮುಖಂಡತ್ವಕ್ಕೆ ಸಾಕಷ್ಟು ಧಕ್ಕೆ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯೊಂದಿಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಶಿವಕುಮಾರ್ ತಿಳಿಸಿದ್ದಾರೆ.