ಬಿಜೆಪಿ ನಾಯಕರ ಫೋಟೋ ಬಳಸಿ ಪೋಸ್ಟ್: ಕಾಂಗ್ರೆಸ್, ಡಿ.ಕೆ.ಶಿವಕುಮಾರ್ ವಿರುದ್ಧ ದೂರು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಹಿರಿಯ ನಾಯಕರ ಫೋಟೋ ಬಳಸಿ ಕಾಂಗ್ರೆಸ್ ಫೇಸ್ಬುಕ್ ಪೇಜ್ನಲ್ಲಿ ಅವಹೇಳನವಾಗಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಫೇಸ್ ಬುಕ್ ಪೇಜ್ ನಿರ್ವಹಣೆ ವಿಭಾಗದವರ ವಿರುದ್ಧ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದೂರು ದಾಖಲಾಗಿರುವುದು ವರದಿಯಾಗಿದೆ.
ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದಿಂದ ಐಪಿಸಿ ಸೆಕ್ಷನ್ 153ಎ, 464, 504 ಮತ್ತು 505(ಬಿ)ರಡಿ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.
ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದ ಹಿನ್ನೆಲೆ, ಬಿಜೆಪಿ ನಾಯಕರು ನಾನು ಕರಸೇವಕ ನನ್ನನ್ನೂ ಬಂಧಿಸಿ ಅಭಿಯಾನ ಮಾಡಿದ್ದರು. ಈ ಅಭಿಯಾನವನ್ನು ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಸಿ.ಟಿ.ರವಿ ಮತ್ತು ಶಾಸಕ ಸುನಿಲ್ ಕುಮಾರ್ ಅವರ ನಾಯಕರ ಫೋಟೋಗಳನ್ನು ತಿರುಚಿ ಸುಳ್ಳು ಮತ್ತು ಕಪೋಲಕಲ್ಪಿತ ಹೇಳಿಕೆಗಳನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
ಬಿಜೆಪಿ ನಾಯಕರ ಫೋಟೋಗಳನ್ನು ಎಡಿಟ್ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ. ಆ ಮೂಲಕ ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕದ ವಿವಿಧ ವರ್ಗದ ನಾಗರಿಕರ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಮತ್ತಷ್ಟು ಕೆಡಿಸುವ ಉದ್ದೇಶದಿಂದ ಮಾಡಿದ, ಸುಳ್ಳು ಮತ್ತು ಕಪೋಲಕಲ್ಪಿತ ಹೇಳಿಕೆಯ ಫಲಕಗಳನ್ನು ಹಾಕಲಾಗುತ್ತಿದೆ. ಜೊತೆಗೆ ಬಿಜೆಪಿ ಹಿರಿಯ ನಾಯಕರನ್ನು ತೇಜೋವಧೆ ಮಾಡಲಾಗುತ್ತಿದೆ. ಈ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.