ನೈತಿಕತೆ ಇದ್ದರೆ ಪ್ರಹ್ಲಾದ್ ಜೋಶಿ ರಾಜೀನಾಮೆ ನೀಡಲಿ: ವಿ.ಎಸ್. ಉಗ್ರಪ್ಪ
ರೈಲ್ವೆ ಇಲಾಖೆ ಭೂಮಿ ಕಬಳಿಕೆ ಯತ್ನ ಆರೋಪ
ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ
ಬೆಂಗಳೂರು: ‘ಹುಬ್ಬಳ್ಳಿ ರೈಲ್ವೆ ಕಾಲನಿಯಲ್ಲಿನ 13 ಎಕರೆ ರೈಲ್ವೆ ಇಲಾಖೆ ಸ್ವತ್ತನ್ನು ಕೇವಲ 83ಕೋಟಿ ರೂ.ಗೆ 99ವರ್ಷ ಪರಭಾರೆ ಮಾಡಲು 5 ಬಾರಿ ಟೆಂಡರ್ ಕರೆದು ತಿರಸ್ಕೃತ ಮಾಡಿದ ಹಾಗೆ ಮಾಡಿ, ಯಾರೂ ಬಂದಿಲ್ಲ ಎಂದು ಮಾರಾಟಕ್ಕೆ ಹುನ್ನಾರ ನಡೆಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮತ್ತವರ ಸಹಪಾಠಿಗಳು ಈ ಸ್ವತ್ತನ್ನು ಕಬಳಿಸಲು ಸಂಚು ರೂಪಿಸಿದ್ದರು’ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ದೂರಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರಸ್ತಾಪ ಮಾಡಿದ ನಂತರ ಕಾಂಗ್ರೆಸ್ ಮತ್ತು ಸುರ್ಜೆವಾಲರವರ ಮೇಲೆ ಕೇಸ್ ಹಾಕುತ್ತೇನೆ ಎಂದು ಜೋಶಿ ಬೆದರಿಸಿದ್ದರು. ಜೋಶಿ ಕೇಸ್ ಹಾಕಿದರೆ ಅವರ ಚರಿತ್ರೆ ಬಿಚ್ಚಿಡಲು ನಮಗೂ ಒಳ್ಳೆಯ ಅವಕಾಶ ಇತ್ತು. ಆದರೆ, ಕಾಂಗ್ರೆಸ್ ಪ್ರತಿಭಟನೆ ಬಳಿಕ ರೈಲ್ವೆ ಇಲಾಖೆ ಸಂಪೂರ್ಣ ಪ್ರಕ್ರಿಯೆ ಹಿಂಪಡೆದಿದೆ ಎಂದು ತಿಳಿಸಿದರು.
ಯಾರೂ ಟೆಂಡರ್ ಹಾಕದ ಕಾರಣ ಈ ಟೆಂಡರ್ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ಜೋಶಿ ಹೇಳುತ್ತಾರೆ. ಆದರೆ, ಟೆಂಡರ್ ತೆರೆಯದೆ ಟೆಂಡರ್ ಯಾರು ಹಾಕಿದ್ದಾರೆ, ಯಾರೂ ಟೆಂಡರ್ ಹಾಕಿಲ್ಲ ಎನ್ನುವ ವಿಚಾರವೆಲ್ಲ ಜೋಶಿಯವರಿಗೆ ಗೊತ್ತಿದೆ ಎಂದ ಮೇಲೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ಅವರ ಕೈವಾಡ ಇದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?’ ಎಂದು ಉಗ್ರಪ್ಪ ಪ್ರಶ್ನಿಸಿದರು.
1,300 ಕೋಟಿ ರೂ.ಬೆಲೆ ಬಾಳುವ ಜಮೀನನ್ನು ಲಪಟಾಯಿಸುವ ಸಂಚು ಮಾಡಿದ್ದೀರಾ?. ನಿಮಗೆ ಮರ್ಯಾದೆ ಇದ್ದರೆ, ಶ್ರೀರಾಮನ ಹೆಸರು ಹೇಳುವ ನೈತಿಕತೆ ಇದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಇರಬೇಕೆಂಬ ಶ್ರೀರಾಮನ ಸಂದೇಶ ಇವರಲ್ಲಿ ಎಲ್ಲಿದೆ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಉಗ್ರಪ್ಪ ಆಗ್ರಹಿಸುತ್ತೇನೆ.