ಪ್ರಜ್ವಲ್ ಪ್ರಕರಣ | ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಕೋರಿದ್ದ ಅರ್ಜಿ : ತುರ್ತು ವಿಚಾರಣೆಗೆ ಹೈಕೋರ್ಟ್ ನಕಾರ
ಪ್ರಜ್ವಲ್ ರೇವಣ್ಣ
ಬೆಂಗಳೂರು : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸಲ್ಲಿಕೆಯಾದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ.ಆರ್.ಮೋಹನ್, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ವಿಚಾರವಾಗಿ ಹಲವಾರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಸಾಕ್ಷ್ಯಾಧಾರಗಳನ್ನು ನಾಶ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಅವಶ್ಯಕತೆ ಇಲ್ಲ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿದೆ. ಲೈಂಗಿಕ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ದೇಶಾದ್ಯಂತ ಸುದ್ದಿಯಲ್ಲಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು . ಈ ವೇಳೆ ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ಮತ್ತೊಂದು ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಹೊಳೆನರಸೀಪುರ ಪೊಲೀಸರು ಹಿಂಬರಹ ಕೊಟ್ಟಿದ್ದರು.
ಈ ಹಿಂಬರಹ ರದ್ದುಪಡಿಸಿ ಎಫ್.ಐ.ಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು. ವಿಡಿಯೋ ಮಾಡಿರುವವರು ಮತ್ತು ವಿಡಿಯೋವನ್ನು ಇತರರಿಗೆ ಹಂಚಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ, ಪೂರ್ಣ ಪ್ರಕರಣದ ನ್ಯಾಯಾಂಗ ತನಿಖೆ ಸೇರಿದಂತೆ ಸ್ವತಂತ್ರ ತನಿಖಾ ಸಂಸ್ಥೆಗಳಿಗೆ ವಹಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿಯ ಎಸ್ಐಟಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಹಾಸನದ ಹೊಳೆನರಸಿಪುರ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಪ್ರತಿವಾದಿಗಳಾಗಿದ್ದಾರೆ.