ಪ್ರಜ್ವಲ್ ರೇವಣ್ಣ ಪ್ರಕರಣ : ಸಂತ್ರಸ್ತೆಯರಿಗಾಗಿ ಸಹಾಯವಾಣಿ ಆರಂಭಿಸಿದ ಎಸ್‌ಐಟಿ
ಬೆಂಗಳೂರು ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಹಾಗೂ ಬಾತ್ಮೀದಾರರ ಕಾನೂನಿನ ನೆರವು ಮತ್ತು ರಕ್ಷಣೆಗೆ ಸಹಾಯವಾಣಿ ತೆರೆದಿರುವುದಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ) ತಿಳಿಸಿದೆ.
ಲೈಂಗಿಕ ಹಗರಣ ಪ್ರಕರಣದ ತನಿಖೆ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ ಇನ್ನೂ ಸಂತ್ರಸ್ತರಿರುವುದು ಗೊತ್ತಾಗಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಕಾರ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ 6360938947ಗೆ ಕರೆ ಮಾಡಬಹುದು. ಸಂಪರ್ಕಿಸಿದವರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡ ಪ್ರಕಟನೆಯಲ್ಲಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಕ್ರಮ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂಥದ್ದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದು ಸಂಬಂಧಿಸಿದ ಬಲಿಪಶು ಮಹಿಳೆಯರ ಘನತೆ ಹಾಗೂ "ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಸ್‌ಐಟಿ ಪ್ರಕಟನೆಯಲ್ಲಿ ತಿಳಿಸಿದೆ.