ಪ್ರಜ್ವಲ್ ರೇವಣ್ಣ ಮೋದಿ ಪರಿವಾರದ ಕುಡಿ: ಸುಪ್ರಿಯಾ ಶ್ರಿನೇತ್
Photo: X/ karnatakacongress
ಬೆಂಗಳೂರು, ಮೇ.1-ರಾಕ್ಷಸೀ ಕೃತ್ಯ ಎಸಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಪರಿವಾರದ ಕುಡಿ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನೇತ್ ಟೀಕಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಕ್ಷಸೀ ಕೃತ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಅವರು ಮೋದಿ ಪರಿವಾರದ ವ್ಯಕ್ತಿ. ಈತ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತದೆ. ತಾನು ಸಾವಿರಾರು ಮಹಿಳೆಯರ ಮೇಲೆ ಎಸಗಿರುವ ಕೃತ್ಯವನ್ನು ತಾನೇ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ ದೇಶದ ದೊಡ್ಡ ಅತ್ಯಾಚಾರ ಪ್ರಕರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಐಟಿ ರಚನೆ ಆಗುತ್ತದೆ ಎಂದು ತಿಳಿದು ಪ್ರಜ್ವಲ್ ಕೆಲವೇ ಗಂಟೆಗಳಲ್ಲಿ ಯಾರಿಗೂ ತಿಳಿಯದಂತೆ ದೇಶ ಬಿಟ್ಟು ತಪ್ಪಿಸಿಕೊಂಡಿದ್ದು ಹೇಗೆ?ಪ್ರಿಯಾಂಕ ಗಾಂಧಿ ಮಗಳನ್ನು ನೋಡಲು ಹೋಗುವುದು ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ. ಆದರೆ ಇಷ್ಟು ದೊಡ್ಡ ಆರೋಪಿ ತಪ್ಪಿಸಿಕೊಂಡು ಹೋಗುವುದು ಗೊತ್ತಾಗುದಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಯವರಿಗೆ ಈಗ ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಮೊದಲೇ ಗೊತ್ತಿತ್ತು. ಈತ ಎಂತವನು ಎಂಬುದು ಮೋದಿಯವರಿಗೆ ಗೊತ್ತಿತ್ತು. ಏಕೆಂದರೆ ಬಿಜೆಪಿ ನಾಯಕ ದೇವರಾಜೇಗೌಡ 2023 ಡಿಸೆಂಬರ್ ತಿಂಗಳಲ್ಲೇ ಮೋದಿ, ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಇಬ್ಬರಿಗೂ ಪತ್ರ ಬರೆದಿದ್ದರು, ಈ- ಮೇಲ್ ಮಾಡಿದ್ದರು. 2024 ಜನವರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೈತ್ರಿ ಬೇಡ ಎಂದು ಎಲ್ಲಾ ಸಾಕ್ಷಿಗಳನ್ನು ನೀಡಿದ್ದರು. ಮೋದಿ ಅವರು ಇದೇ ಮೊದಲ ಬಾರಿಗೆ ಆರೋಪಿಯನ್ನು ಭೇಟಿ ಮಾಡುತ್ತಿಲ್ಲ. ಮೈತ್ರಿ ಮಾತುಕತೆ ವೇಳೆ ದೆಹಲಿಯಲ್ಲಿ ಭೇಟಿ ಮಾಡಿದ್ದಲ್ಲದೇ ಲೋಕಸಭಾ ಚುನಾವಣೆಯ 15 ದಿನ ಮೊದಲು ಪ್ರಜ್ವಲ್ ರೇವಣ್ಣ ಪರವಾಗಿ ಮತ ಕೇಳುತ್ತಾ ಒಂದೇ ವೇದಿಕೆಯನ್ನು ಹಂಚಿಕೊಂಡು ನಿಂತಿದ್ದರು ಎಂದು ಹೇಳಿದರು.
ಈ ದೇಶದಲ್ಲಿ ಯಾವುದೇ ಮಹಿಳೆಯ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಅವರು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಾರೆ. 500 ಮೀ ದೂರ ನಿಲ್ಲುತ್ತಾರೆ. ಮಹಿಳೆಯರು ಅತ್ತು ಕರೆದರೂ ಅವರಿಗೆ ಕೇಳಿಸುವುದಿಲ್ಲ. ಆದರೆ ಮನೆಗೆಲಸದವರು, ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ಎಸಗಿದ್ದೆಲ್ಲಾ ಗೊತ್ತಿದ್ದರೂ ಮೈಸೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ನೀಚ ವ್ಯಕ್ತಿಯ ಕೈ ಹಿಡಿಯುತ್ತಾರೆ. ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.