ಪ್ರಜ್ವಲ್ ರೇವಣ್ಣ ಧೈರ್ಯವಾಗಿ ಎಸ್‍ಐಟಿ ತನಿಖೆ ಎದುರಿಸಬೇಕು : ಬಿ.ವೈ.ವಿಜಯೇಂದ್ರ
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯನ್ನು ಗಮನಿಸಿದ್ದೇನೆ. ಎಸ್‍ಐಟಿ ಎದುರು ಹಾಜರಾಗಿ ವಿಚಾರಣೆಗೆ ಒಳಗಾಗುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಜನಪ್ರತಿನಿಧಿ ಆಗಿರುವವರು ಧೈರ್ಯವಾಗಿ ತನಿಖೆ ಎದುರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕಳೆದ ಒಂದು ತಿಂಗಳಿನಿಂದ ವಿವಿಧ ಬಗೆಯ ವಿಷಯಗಳು ಹರಿದಾಡಿವೆ. ಅವರು ತನಿಖಾ ಸಂಸ್ಥೆಯ ಎದುರು ಹಾಜರಾಗಿ, ವಿಚಾರಣೆ ಎದುರಿಸಲಿ" ಎಂದು ಹೇಳಿದರು.
ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ: ಎಸ್‍ಟಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ.ಗಳ ಹಗರಣ ನಡೆದಿರುವ ಕುರಿತು ಡೆತ್ ನೋಟ್ ಬರೆದಿಟ್ಟು ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲಾಖೆಯ ಸಚಿವರ ಮೌಖಿಕ ಆದೇಶದ ಮೇರೆಗೆ ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಹಾಗೂ ಈ ಹಗರಣದ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಈ ಸರಕಾರದ ಸಾಧನೆ ಶೂನ್ಯ. ಮುಖ್ಯಮಂತ್ರಿ ಆದಿಯಾಗಿ ಯಾರೇ ಒಬ್ಬ ಸಚಿವರು ಒಂದೇ ಒಂದು ಗುದ್ದಲಿಪೂಜೆ ಮಾಡಿಲ್ಲ, ಒಂದೇ ಒಂದು ಶಂಕುಸ್ಥಾಪನೆ ಆಗಿಲ್ಲ. ಹೊಸ ಯೋಜನೆಗಳನ್ನು ಘೋಷಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದಿಂದ ಬರ ಪರಿಹಾರ ಬಂದರೂ ತಾಂತ್ರಿಕ ಕಾರಣಗಳನ್ನು ಒಡ್ಡಿ ರೈತರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಪರಿಹಾರ ಮೊತ್ತವನ್ನು ನೀಡಿಲ್ಲ. ಬೆಳೆ ವಿಮೆಯನ್ನೂ ಕೊಟ್ಟಿಲ್ಲ. ಕಳೆದ ಅಕ್ಟೋಬರ್ ನಿಂದ 800 ಕೋಟಿ ರೂ.ಗಳಿಗೂ ಹೆಚ್ಚಿನ ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ ಎಂದು ವಿಜಯೇಂದ್ರ ಟೀಕಿಸಿದರು.