"ಸತ್ಯ ಆದಷ್ಟು ಬೇಗ ಹೊರಬರಲಿದೆ" : ಲೈಂಗಿಕ ಹಗರಣ ಸಂಬಂಧ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ
ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಬೆಂಗಳೂರು : ಲೈಂಗಿಕ ಹಗರಣದ ಆರೋಪಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಸಂಬಂಧ ಎಸ್‌ಐಟಿ ತನಿಖೆಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ಅವರು, "ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ" ಪೋಸ್ಟ್ ಮಾಡಿದ್ದಾರೆ.
7 ದಿನಗಳ ಕಾಲಾವಕಾಶ ಕೋರಿ ಎಸ್‌ಐಟಿಗೆ ಪತ್ರ
ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕಲಂ 41(ಎ) ಸಿಆರ್‌ಪಿಸಿ ನೋಟಿಸ್‌ಗೆ ಖುದ್ದಾಗಿ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂದು ಎಸ್‌ಐಟಿ ಬಳಿ ಕೋರಿದ್ದಾರೆ.
ಪ್ರಜ್ವಲ್ ಪರ ವಕೀಲ ಅರುಣ್ ಜಿ.ಅವರು ವಿಶೇಷ ತನಿಖಾ ತಂಡದ ಪೊಲೀಸ್ ಉಪಾಧೀಕ್ಷರಿಗೆ ಲಿಖಿತ ಪತ್ರ ಬರೆದು ಮನವಿ ಮಾಡಿದ್ದಾರೆ.
ನನ್ನ ಕಕ್ಷಿದಾರ ಪ್ರಜ್ವಲ್ ರೇವಣ್ಣ ಅವರ ಮನೆಗೆ ತಮ್ಮ ಕಚೇರಿಯಿಂದ ನೋಟಿಸ್ ಅಂಟಿಸಿರುವ ಬಗ್ಗೆ ಅವರ ಕುಟುಂಬದಿಂದ ನನಗೆ ಮಾಹಿತಿ ಬಂದಿದೆ. ಎ.30 ರಂದು ತಮ್ಮ ನೋಟಿಸ್ ನಲ್ಲಿ ಪ್ರಜ್ವಲ್ ರೇವಣ್ಣ ಮೇ 1 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿದ್ದೀರಿ. ಆದರೆ ನನ್ನ ಕಕ್ಷಿದಾರ ಬೆಂಗಳೂರಿನ ಹೊರಗಡೆ ಪ್ರವಾಸದಲ್ಲಿರುವುದರಿಂದ ಅವರಿಗೆ ನೋಟಿಸ್ ಬಗ್ಗೆ ತಿಳಿದಿದ್ದೇನೆ .ಅವರು ಬೆಂಗಳೂರಿಗೆ ಬಂದು ತಮ್ಮ ಮುಂದೆ ಹಾಜರಾಗಲು 7 ದಿನಗಳ ಕಾಲಾವಕಾಶ ಬೇಕು ಎಂದು ತಿಳಿಸಿದ್ದು, ಇದಕ್ಕೆ ಅವಕಾಶ ನೀಡಿ, ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಅರುಣ್ ಅವರು ಕೋರಿದ್ದಾರೆ.
ಸಂಸದ ಪ್ರಜ್ವಲ್ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಸಂಬಂಧ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಈಗಾಗಲೇ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಎಸ್ಐಟಿ ತಂಡ ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ.