ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ | ಕುಮಾರಸ್ವಾಮಿಗೆ 20 ನಾಲಿಗೆ : ಕಾಂಗ್ರೆಸ್ ಆಕ್ರೋಶ
ಕುಮಾರಸ್ವಾಮಿ
ಬೆಂಗಳೂರು: ‘ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಬಾಯಲ್ಲಿ ಕೇವಲ ಎರಡು ನಾಲಿಗೆ ಇವೆ ಎಂದುಕೊಂಡಿದ್ದೆವು. ಆದರೆ, ಅವರಿಗೆ 20 ನಾಲಿಗೆ ಇದೆ ಎನ್ನುವುದು ಪ್ರಜ್ವಲ್ ಪ್ರಕರಣದಿಂದ ಬೆಳಕಿಗೆ ಬಂದಿದೆ. ಯಾವ ಸಂದರ್ಭಕ್ಕೆ ಯಾವ ನಾಲಿಗೆಯನ್ನು ಬಳಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ’ ಎಂದು ಕಾಂಗ್ರೆಸ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ರವಿವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕರ್ನಾಟಕವು ಹಲವು ಮುತ್ಸದ್ದಿ ರಾಜಕಾರಿಣಿಗಳಿಂದ ದೇಶಕ್ಕೆ ನೈತಿಕ ರಾಜಕಾರಣದ ಮಾದರಿ ಮಾರ್ಗವನ್ನು ಹಾಕಿಕೊಟ್ಟಿತ್ತು. ಪ್ರಜ್ವಲ್ ಅತ್ಯಾಚಾರ ಪ್ರಕರಣವು ರಾಜ್ಯದ ರಾಜಕೀಯ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ. ಆದರೆ ಪ್ರಮುಖ ಉತ್ತರದಾಯಿ ಕುಮಾರಸ್ವಾಮಿ ಮಾತ್ರ ನಿರ್ಲಜ್ಜರಾಗಿ ತಲೆ ಎತ್ತಿ ತಿರುಗುತ್ತಿದ್ದಾರೆ.
‘ಪ್ರಜ್ವಲ್ ರೇವಣ್ಣ ಪರ ಮತ ಕೇಳುವಾಗ ‘ನನ್ನ ಮಗ’ ಎಂದವರು, ಆ ನಂತರ ‘ಸಂಬಂಧವಿಲ್ಲ’ ಎಂದರು. ತದನಂತರ ‘ಪ್ರಜ್ವಲ್ ಆರೋಪಿಯಷ್ಟೇ, ಅಪರಾಧಿಯಲ್ಲ’ ಎನ್ನುವ ಬಂಡತನಕ್ಕಿಳಿದರು. ಸಂಸದ ಪ್ರಜ್ವಲ್ನ ಹೀನ ಕೃತ್ಯಗಳಿಗೆ ಸಹಜ ಮತ್ತು ಸಮ್ಮತಿಯ ಬಟ್ಟೆ ತೊಡಿಸಿದರು’ ಎಂದು ಕಾಂಗ್ರೆಸ್ ಇದೇ ವೇಳೆ ವಾಗ್ದಾಳಿ ನಡೆಸಿದೆ.
‘ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳಲು ಸಹಾಯಕವಾಗಿದ್ದು ಆತನ ಹುದ್ದೆ, ಆತನ ಕುಟುಂಬದ ಹಿನ್ನೆಲೆ, ಆತನ ಕುಟುಂಬದ ಪ್ರಭಾವ. ಆತನಿಗೆ ಈ ಧೈರ್ಯ ಬರುವುದರಲ್ಲಿ ಕುಮಾರಸ್ವಾಮಿಯವರ ಪಾಲೂ ಇದೆ, ಎಚ್ಡಿಕೆಗೆ ಅವರ ಕುಟುಂಬ ಸದಸ್ಯನೊಬ್ಬನ ಹೇಯ ಕೃತ್ಯದ ಹೊಣೆಯ ಪಾಲನ್ನೂ ಹೊರಬೇಕಿದೆ’ ಎಂದು ಕಾಂಗ್ರೆಸ್ ಹೇಳಿದೆ.
‘ರಾಜ್ಯದ ಮಾಜಿ ಸಿಎಂ ಆಗಿ ತಮ್ಮ ಕುಟುಂಬದವರ ಕುಕೃತ್ಯಕ್ಕೆ ಕ್ಷಮೆ ಕೇಳುವ ಸೌಜನ್ಯ ತೋರಲಿಲ್ಲ ಎಂದರೆ ಇದು ಹೊಣೆಗಾರಿಕೆಯ ರಾಜಕಾರಣಕ್ಕೆ ಮಾಡಿದ ಅಪರಾಧ. ತಮಗೂ ತಮ್ಮ ಅಣ್ಣನ ಮಗ ಪ್ರಜ್ವಲ್ ಕೃತ್ಯಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡುವ ಕುಮಾರಸ್ವಾಮಿ ಅದೇ ಪ್ರಕರಣದಲ್ಲಿ ಒಕ್ಕಲಿಗ ಸಮುದಾಯದ ಸಂಬಂಧ ಜೋಡಿಸಲು ಹೊರಡುತ್ತಾರೆ. ತಮ್ಮ ಅಣ್ಣನ ಮಗನ ಕೃತ್ಯಕ್ಕೆ ಸಂಬಂಧವಿಲ್ಲ ಎನ್ನುವುದಾದರೆ ತಮ್ಮವರ ಮೇಲಿನ ಆರೋಪ ಒಂದಿಡೀ ಸಮುದಾಯಕ್ಕೆ ಹೇಗೆ ಸಂಬಂಧಿಸುತ್ತದೆ? ಇದ್ಯಾವ ಥಿಯರಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಪ್ರಜ್ವಲ್ ರೇವಣ್ಣನ ಪಾಪ ಕೃತ್ಯವು ‘ಅತ್ಯಾಚಾರ ಪ್ರಕರಣ’ವಾಗಿದೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅದನ್ನು ವ್ಯವಸ್ಥಿತವಾಗಿ ‘ಪೆನ್ಡ್ರೈವ್ ಪ್ರಕರಣ’ ಎಂದು ಬಿಂಬಿಸಲು ಸಾಕಷ್ಟು ಶ್ರಮ ಹಾಕುತ್ತಿವೆ. ಮಹಿಳೆಯರ ಅಸಹಾಯಕತೆಯನ್ನು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿದ್ದು ನಾಗರಿಕ ಸಮಾಜ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಅಲ್ಲದೆ ಅದನ್ನು ಚಿತ್ರಿಕರಿಸಿಕೊಂಡು ಬ್ಲಾಕ್ಮೇಲ್ ಮಾಡಿ ಹೊರ ಜಗತ್ತಿಗೆ ತಿಳಿಸದಂತೆ ಬೆದರಿಸುವುದು ಮತ್ತೊಂದು ಮಹಾ ಅಪರಾಧ’ ಎಂದು ಕಾಂಗ್ರೆಸ್ ಹೇಳಿದೆ.
‘ದೇಶವಷ್ಟೇ ಅಲ್ಲ, ವಿದೇಶಿ ಮಾದ್ಯಮಗಳಲ್ಲೂ ಈ ಅತ್ಯಾಚಾರ ಪ್ರಕರಣ ಸುದ್ದಿಯಾಗಿ, ಅಸಹಜ ಹಾಗೂ ಅನಾಗರಿಕ ಕೃತ್ಯವೆಂದು ಪರಿಗಣಿಸಲಾಗಿದೆ. ಇಂತಹ ಅತ್ಯಂತ ಹೀನ ಕೃತ್ಯ ತಮ್ಮ ಪಕ್ಷದಿಂದ, ತಮ್ಮ ಕುಟುಂಬದಿಂದ ನಡೆದಿದ್ದರೂ ಕುಮಾರಸ್ವಾಮಿಗೆ ಕಿಂಚಿತ್ ಪಾಪ ಪ್ರಜ್ಞೆ ಕಾಡಲಿಲ್ಲ, ಕಿಂಚಿತ್ ನಾಚಿಕೆ ಎನಿಸಲಿಲ್ಲ, ಆತ್ಮಸಾಕ್ಷಿ ಕದಡಲಿಲ್ಲ. ಪಾಪ ಪ್ರಜ್ಞೆ ಕಾಡುವ ಬದಲು ಧೂರ್ತ ಪ್ರಜ್ಞೆ ಜಾಗೃತವಾಗಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದ ಎಚ್ಡಿಕೆ ನಡುವಳಿಕೆ ಪ್ರಜ್ವಲ್ನ ಕೃತ್ಯಕ್ಕಿಂತ ಭಿನ್ನವೇನಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ.