ಪ್ರತಾಪ್ ಸಿಂಹ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲವೇ?: ಬಿಎಸ್ ವೈ ಭೇಟಿ ಬಳಿಕ ರೇಣುಕಾಚಾರ್ಯ ಪ್ರತಿಕ್ರಿಯೆ
► ''ಮೋದಿ, ಅಮಿತ್ ಶಾ ಭೇಟಿಯಾಗಿ ದೂರು ನೀಡುವೆ''
ಬೆಂಗಳೂರು: ''ಯಡಿಯೂರಪ್ಪ ಅವರು ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಲ್ಲ, ಈಗಿರುವಂತವ ನಾಯಕರು ಯಾರೂ ಬಿಜೆಪಿ ಕಟ್ಟಿಲ್ಲ'' ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷ ನಾಯಕ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
''ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 11 ಜನರಿಗೆ ನೋಟೀಸ್ ಕೊಡಲಾಗಿದೆ ಎಂದು ಹೇಳಿದ್ದರು.ಆದರೆ, ನನ್ನನ್ನು ಹೊರತು ಪಡಿಸಿ ಉಳಿದವರಿಗೆ ಯಾರಿಗೂ ನೊಟಿಸ್ ಕೊಟ್ಟಿಲ್ಲ. ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲವೇ? ಈ ಹೀನಾಯ ಸ್ಥಿತಿಗೆ ಕಾರಣ ಯಾರು ಎಂದು ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು,ಅಮಿತ್ ಶಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇನೆ'' ಎಂದು ಹೇಳಿದರು.
ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂದು ಗೊತ್ತಾಗಿದ್ದೇ ನನಗ ನೋಟೀಸ್ ಕೊಟ್ಟ ಬಳಿಕ ಎಂದ ಅವರು, ಅಕ್ಕಿ ಕಡಿತ,ಒಳ ಮೀಸಲಾತಿ ಮಾಡಿದ್ದರಿಂದ ಸೋಲಾಯಿತು ಎಂದಷ್ಟೇ ಹೇಳಿದ್ದೇನೆ. ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರ್ಪಡೆ ಉಹಾಪೋಹ. ಮಾಧ್ಯಮದ ಮುಂದೆ ಬಹಿರಂಗ ಹೇಳಿಕೆ ಕೊಡಲ್ಲ. ನನ್ನನ್ನ ಬಲಿ ಪಶು ಮಾಡಲು ಸಾಧ್ಯವಿಲ್ಲ'' ಎಂದು ಕಿಡಿಕಾರಿದರು.