ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಬೀದಿಯಲ್ಲಿ ನಿಲ್ಲಿಸಿದ್ದಾರೆ : ಸಚಿವ ಮಧು ಬಂಗಾರಪ್ಪ ವ್ಯಂಗ್ಯ
ಶಿವಮೊಗ್ಗ, ಆ.30: ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಟಿಪ್ಪಣಿ ಮಾಡುತ್ತಿದ್ದರು, ಆದರೆ ಅವರನ್ನು ನಾವು ದೂರ ನಿಲ್ಲಿಸೋದು ಬೇಡ. ಅವರ ಪ್ರಧಾನಿಯವರೇ ನಿಲ್ಲಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಇತಿಹಾಸ ಪುಟಕ್ಕೆ ಸೇರುವ ಯೋಜನೆಯನ್ನು ನಮ್ಮ ಸರ್ಕಾರ ಕೊಡುತ್ತಿದೆ.ಗೃಹಲಕ್ಷ್ಮಿ ಯೋಜನೆಯನ್ನು ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರ ಜಾರಿಗೊಳಿಸಿದೆ ಎಂದರು.
ಗೃಹ ಲಕ್ಷ್ಮೀ ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ಕೊಡುತ್ತಿದ್ದೇವೆ.ಬೆಲೆ ಏರಿಕೆಯ ನಡುವೆ ಕುಟುಂಬದ ನಿರ್ವಹಣೆಗೆ ಕೊಡಲಾಗ್ತಿದೆ.ಅನ್ನಭಾಗ್ಯ, ಗೃಹಜ್ಯೋತಿ, ಹಾಗೂ ಶಕ್ತಿ ಯೋಜನೆ ಈಗಾಗಲೇ ಕೊಟ್ಟಿದ್ದೇವೆ.ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡುತ್ತಿದ್ದರು, ಅವರನ್ನು ನಾವು ದೂರ ನಿಲ್ಲಿಸೋದು ಬೇಡ. ಅವರ ಪ್ರಧಾನಿಯವರೇ ನಿಲ್ಲಿಸಿದ್ದಾರೆ. ಪ್ರಧಾನಿ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷರೇ ಬ್ಯಾರಿಕೇಡ್ ಹಿಂದೆ ನಿಂತಿದ್ದರು.ಪ್ರಧಾನಿ ಉತ್ತರ ಕೊಟ್ಟಿದ್ದನ್ನು ರಾಜ್ಯದ ಜನರು ನೋಡಿದ್ದಾರೆ ಎಂದು ವ್ಯಂಗ್ಯವಡಿದರು.
ಕೇಂದ್ರ ಸರ್ಕಾರದ ಗ್ಯಾಸ್ ಸಿಲಿಂಡರ್ ರೇಟ್ ಕಡಿಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಉಚಿತವಾಗಿ ಕೊಡುತ್ತೇವೆ ಎಂದವರು 200 ರೂ. ಕಡಿಮೆ ಮಾಡಿದ್ದಾರೆ.ಪುಗ್ಸಟ್ಟೆ ಕೊಡುತ್ತೇವೆ ಎಂದು ಹೇಳಿದ ಮಾತು ಉಳಿಸಿಕೊಳ್ಳಲಿ.ಪ್ರಧಾನಿಯವರು ಉಚಿತವಾಗಿ ಕೊಡಲಿ.ನಾನೇ ಹೋಗಿ ಹಾರ ಹಾಕ್ತೇನೆ. ಸನ್ಮಾನ ಮಾಡ್ತೇನೆ ಎಂದರು.
ಕಾವೇರಿ ನೀರು ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಈ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ.ಈ ಸಂದರ್ಭದಲ್ಲಿ ತಂದೆ ಬಂಗಾರಪ್ಪರನ್ನು ನೆನಪು ಮಾಡಿಕೊಳ್ಳಬೇಕು.ಅಂದಿನ ಕೋರ್ಟ್ ಆದೇಶ ಹಾಗೂ ಇಂದಿನ ಕೋರ್ಟ್ ಆದೇಶ ಬದಲಾವಣೆ ಅಗಿದೆ.ಕಾನೂನಿಗೆ ನಾವು ತಲೆ ಬಾಗಬೇಕಾಗುತ್ತದೆ.ಕಾನೂನು ಕೂಡ ನಮ್ಮ ವಸ್ತುಸ್ಥಿತಿ ಅಧರಿಸಿ, ತೀರ್ಮಾನ ತೆಗೆದುಕೊಳ್ಳಬೇಕು ಎಂದ ಅವರು,ಇಲ್ಲೂ ರೈತರೇ,ಅಲ್ಲೂ ರೈತರೇ ಯಾರಿಗೂ ತೊಂದರೆಯಾಗಬಾರದು.ಆದರೇ, ರಾಜ್ಯದ ರೈತರ ಹಿತ ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಬರಗಾಲ ಪರಿಸ್ಥಿತಿ ವಿಚಾರವಾಗಿ ಮಾತನಾಡಿದ ಅವರು,ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ.ಬರಗಾಲ ಎಂದೂ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ.ಕೇಂದ್ರ ಸರ್ಕಾರದ ನಿಯಮಾವಳಿ ಯಲ್ಲಿ ಒಂದಷ್ಟು ಬದಲಾವಣೆ ಆಗಬೇಕು.ಎಲ್ಲವನ್ನೂ ಪರಿಶೀಲಿಸಿ, ಸರ್ಕಾರ ನಿರ್ಧಾರ ಮಾಡುತ್ತೇ.ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಘೋಷಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸರ್ಕಾರಕ್ಕೆ ನೂರು ದಿನ- ಬಿಜೆಪಿ ಚಾರ್ಜ್ ಶೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಬಿಜೆಪಿಯವರು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಎಷ್ಟು ಜನ ಸಿಕ್ಕು ಹಾಕೊಂಡಿದ್ದಾರೆ.ಸುಮ್ನೆ ಪಟ್ಟಿ ಬಿಡುಗಡೆ ಮಾಡಿದರೆ ಅಗಲ್ಲ. ಅದರಲ್ಲಿ ಅಂಶಗಳು ಇರಬೇಕು.ಸೋತವರು ಟೀಕಾ- ಟಿಪ್ಪಣಿ ಬಿಟ್ಟು ಬೇರೆನು ಮಾಡೋಕೆ ಸಾಧ್ಯ.ಭ್ರಷ್ಟಾಚಾರ ನಡೆದರೆ ಹೇಳಲಿ ಸರ್ಕಾರ ಕ್ರಮ ಕೈಗೊಳ್ಳುತ್ತೇ.ಟೀಕಾ- ಟಿಪ್ಪಣಿ ಮಾಡುವುದು ಬಿಜೆಪಿಯವರಿಗೆ ಅದೊಂದು ರೋಗದ ರೀತಿ ಆಗಿದೆ ಎಂದು ಹೇಳಿದರು.
ಪಕ್ಷಾಂತರ ವಿಚಾರವಾಗಿ ಪ್ರತಿಕ್ರಿಯಿಸಿ,ಲೋಕಸಭೆ ಚುನಾವಣೆಗೆ ಶಕ್ತಿ ತುಂಬುವ ಕೆಲಸ ಆಗುತ್ತಿದೆ.ಹೈಕಮಾಂಡ್, ಸಿಎಂ ಹಾಗೂ ಡಿಸಿಎಂ ಸೂಚನೆಯಂತೆ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ.ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಮಾಜಿ ಸಂಸದ ಆಯನೂರು ಮಂಜುನಾಥ್,ಮುಖಂಡರಾದ ಜಿ.ಡಿ ಮಂಜುನಾಥ್,ಎನ್.ರಮೇಶ್,ರವಿಕುಮಾರ್ ಮೊದಲಾವರಿದ್ದರು.