ಕೊಳೆಗೇರಿ ನಿವಾಸಿಗಳಿಗೆ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ: ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಜು. 27: ‘ಚಾಮರಾಜಪೇಟೆ ಕ್ಷೇತ್ರದ ಜಾಲಿ ಮೊಹಲ್ಲಾ ಹಾಗೂ ಭಕ್ಷಿ ಗಾರ್ಡನ್ ಕೊಳೆಗೇರಿಯಲ್ಲಿ ವಾಸಿಸುವ 262 ಕುಟುಂಬಗಳಿಗೆ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗುವುದು’ ಎಂದು ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಭರವಸೆ ನೀಡಿದ್ದಾರೆ.
ಗುರುವಾರ ಕ್ಷೇತ್ರದಲ್ಲಿ ಕೊಳಗೇರಿಗಳಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ‘ಭಕ್ಷಿ ಗಾರ್ಡನ್‍ನಲ್ಲಿ ರಾಜಕಾಲುವೆ ಮೇಲೆ 52 ಕುಟುಂಬ ಗುಡಿಸಲು ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಪರ್ಯಾಯ ಜಾಗದ ಬಗ್ಗೆಯೂ ಸಮೀಕ್ಷೆ ನಡೆಸುವಂತೆ ಹಾಗೂ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಸಮಯ ಬೇಕಾದ ಕಾರಣ ಬೇರೆ ಕಡೆ ತಾತ್ಕಾಲಿಕವಾಗಿ ಶಿಫ್ಟ್ ಮಾಡುವ ಬಗ್ಗೆಯೂ ಪರಿಶೀಲಿಸಿ 15 ದಿನಗಳಲ್ಲಿ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಹತ್ತಾರು ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸಿಸುತ್ತಿರುವ ಎಲ್ಲ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಇಲಾಖೆಯಲ್ಲಿ ಯಾವುದೇ ರೀತಿಯಲ್ಲಿಯೂ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಸ್ಥಳೀಯ ನಿವಾಸಿಗಳ ಬೇಡಿಕೆ ಸಂಬಂಧ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಕೊಳೆಗೇರಿ ಅಭಿವೃದ್ಧಿ ಮಂಡಳಿ ಪ್ರಧಾನ ಅಭಿಯಂತರ ಬಲರಾಜು, ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಹಾಜರಿದ್ದರು.