ಹಿಂದುತ್ವವಾದಿಯ ವರದಿಯನ್ನು ಎಫ್ಎಸ್ಎಲ್ ವರದಿಯೆಂದು ಹೇಳಿ ಪೇಚಿಗೀಡಾದ ಬಿಜೆಪಿ
ಹೀಗೂ ಇರುತ್ತಾ ಎಫ್ಎಸ್ಎಲ್ ವರದಿ ಎಂದು ಕೇಳಿದ ಜನ
ಫಣೀಂದ್ರ ಬಿ.ಎನ್.
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಂಘ ಪರಿವಾರದ ಪರವಾಗಿ ಹಾಗು ಮುಸ್ಲಿಂ ದ್ವೇಷದ ಪೋಸ್ಟ್ ಗಳನ್ನು ಹಾಕುವ ವ್ಯಕ್ತಿಯೊಬ್ಬ ತನ್ನ ಸಂಸ್ಥೆಯ ಮೂಲಕ ನೀಡಿದ ವರದಿಯನ್ನೇ ವೈಜ್ಞಾನಿಕ ಎಫ್ ಎಸ್ ಎಲ್ ವರದಿ ಎಂದು ಶೇರ್ ಮಾಡಿಕೊಂಡ ಬಿಜೆಪಿ ಕರ್ನಾಟಕ ಮುಜುಗರಕ್ಕೆ ಈಡಾಗಿದೆ.
ಸಂವಾದ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆಯು clue4evidence ಎಂಬ ಸಂಸ್ಥೆಯ ಮೂಲಕ ಒಂದು ವರದಿಯನ್ನು ಪಡೆದಿದೆ. ರಾಜ್ಯಸಭಾ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಪರವಾಗಿ ಕೂಗಲಾದ ಘೋಷಣೆಗಳ ಕುರಿತು ಈ ವರದಿ ಪಡೆಯಲಾಗಿದ್ದು, ಇದನ್ನೇ ಪೊಲೀಸ್ ತನಿಖೆಯ ಅಧಿಕೃತ ವರದಿ ಎಂಬಂತೆ ಬಿಜೆಪಿ ಬಿಂಬಿಸಿ ಪ್ರಚಾರ ಮಾಡಿದೆ. ಖಾಸಗಿ ಸಂಸ್ಥೆ ಮಾಡಿಸಿರುವ ಪರೀಕ್ಷೆಯನ್ನು ಪೊಲೀಸ್ ಇಲಾಖೆ ಮಾಡಿಸಿರುವ ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಬಿಂಬಿಸಿ, ಅದರ ಪ್ರತಿಗಳನ್ನು ಭಾರತೀಯ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಅದನ್ನೇ ಇಟ್ಟುಕೊಂಡು ಕಾಂಗ್ರೆಸ್ ಸರಕಾರದ ಮೇಲೆ ಹರಿಹಾಯ್ದಿದೆ.
ಈ ಸಂವಾದ ಫೌಂಡೇಶನ್ ಎಂಬ ಸಂಸ್ಥೆ ನಡೆಸುವ ಸಂವಾದ ಎಂಬ ಯೂಟ್ಯೂಬ್ ಚಾನಲ್ ಹಾಗು ಫೇಸ್ ಬುಕ್ ಪೇಜ್ ಸದಾ ಸಂಘ ಪರಿವಾರದ ಆಶಯಗಳನ್ನೇ ಪ್ರತಿಪಾದಿಸುವ ಹಾಗು ಮುಸ್ಲಿಂ ದ್ವೇಷ ಹರಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುತ್ತದೆ. ಈಗ ನೋಡಿದರೆ ವರದಿ ನೀಡಿರುವ ಫಣೀಂದ್ರ ಬಿ.ಎನ್. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಷಯಗಳನ್ನು ಗಮನಿಸಿದರೆ, ಈತ ಮುಸ್ಲಿಂ ದ್ವೇಷ ಇರುವ ಸಂಘಪರಿವಾರದ ಕಟ್ಟಾ ಬೆಂಬಲಿಗ ಎಂಬುದು ಸ್ಪಷ್ಟವಾಗುತ್ತದೆ.
clue4evidence ಸಂಸ್ಥೆಯ ಮುಖ್ಯಕಚೇರಿ ಬೆಂಗಳೂರಿನ ಡಿಕನ್ ಸನ್ ರಸ್ತೆಯಲ್ಲಿದ್ದು, ಅದರ ವೆಬ್ ಸೈಟ್ ಪ್ರಕಾರ ಅದಕ್ಕೆ ಮೈಸೂರು ಮತ್ತು ಕೊಚ್ಚಿನ್ ನಲ್ಲಿ ಕಚೇರಿಗಳಿವೆ. ಖಾಸಗಿಯಾಗಿ FSL ವರದಿಗಳನ್ನು ಮಾಡುವ ಇದು, ಡಿಎನ್ ಎ ಅನಾಲಿಸಿಸ್ ಮಾಡುವುದಾಗಿಯೂ ಹೇಳಿಕೊಳ್ಳುತ್ತದೆ.
ಈಗ ಇಂತಹ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಿಂದ ಸಂಘ ಪರಿವಾರದ ಮುಖವಾಣಿ ಫೌಂಡೇಶನ್ ಮಾಡಿಸಿರುವ ವರದಿಯನ್ನೇ ವೈಜ್ಞಾನಿಕ ಹಾಗು ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಬಿಜೆಪಿ ಪ್ರಕಟಿಸಿದೆ. ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಜೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ. ರಾಷ್ಟ್ರ ವಿರೋಧಿ ಧೋರಣೆಯ @INCKarnataka ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹೇಳಿದೆ.
ಆದರೆ ಬಿಜೆಪಿಯ ಈ ಪ್ರಕಟಣೆಯನ್ನು ಜನ ಪ್ರಶ್ನಿಸುತ್ತಿದ್ದಾರೆ. ಇದ್ಯಾವ ರೀತಿಯ ಎಫ್ ಎಸ್ ಎಲ್ ವರದಿ ? ಹೀಗೂ ವರದಿ ಇರುತ್ತಾ ? ವೀಡಿಯೊದಲ್ಲಿ 'ತಾನ್' ಎಂದು ಹೇಳಿದ್ದು ಕೇಳಿದೆ ಹಾಗಾಗಿ ಅದು 'ಪಾಕಿಸ್ತಾನ್' ಇರಬಹುದು ಎಂದು ಹೇಳಿರುವ ವರದಿಯ ಅಂಶವನ್ನೇ ಜನರು ಪ್ರಶ್ನಿಸಿ ಇದ್ಯಾವ ವೈಜ್ಞಾನಿಕ ವರದಿ? ಈ ರೀತಿ ಯಾರಾದರೂ ತೀರ್ಮಾನಕ್ಕೆ ಬರುತ್ತಾರಾ ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಅಧಿಕೃತ ವರದಿ ಬರುವ ಮೊದಲೇ ಖಾಸಗಿ ಸಂಸ್ಥೆಯಿಂದ ಈ ರೀತಿ ವರದಿ ಮಾಡಿಸುವ ಉದ್ದೇಶ ಏನು? ಆ ಖಾಸಗಿ ಸಂಸ್ಥೆ ಹಾಗು ವ್ಯಕ್ತಿಯ ವಿಶ್ವಾಸಾರ್ಹತೆ ಏನು? ಅವರ ಹಿನ್ನೆಲೆ ಸಂಘ ಪರಿವಾರದ್ದೇ ಆಗಿರುವುದು ಕಾಕತಾಳೀಯವೇ ಎಂದು ಜನ ಕೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಸಂಸ್ಥೆಯ ಫೊರೆನ್ಸಿಕ್ ವರದಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ವರದಿ ತಯಾರಿಸಿದ ಖಾಸಗಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ.
“ಖಾಸಗಿ ಸಂಸ್ಥೆ ಮೇಲೆ FIR ಹಾಕಿ. Sovereign power ಚಲಾಯಿಸಿ, ಖಾಸಗಿ ಸಂಸ್ಥೆ FR ತಯಾರಿಸಿದ ರೀತಿ, ಉಪಯೋಗಿಸಿದ ವಿಧಾನ, ಬಳಸಿದ software, ಮುಂತಾದ ವರದಿ ಪೊಲೀಸರಿಗೆ ನೀಡಲು ನಿರ್ದೇಶಿಸಿ. ಸರಕಾರ ಮಾನ್ಯತೆ ಇಲ್ಲದೆ ಖಾಸಗಿ ಸಂಸ್ಥೆಗಳು ಯಾವುದೇ ಪೊಲೀಸ್ ಕೇಸುಗಳ forensic report ತಯಾರಿ ಮಾಡಿ ಸಾರ್ವಜನಿಕ ಆಗಿ ಬಿಡುಗಡೆ ಮಾಡಲು ನಿಷಿದ್ಧ” ಎಂದು ಶಿವ ನಾಯ್ಕ್ ಎಂಬವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಟೀಕೆ
ಎಫ್ಎಸ್ಎಲ್ ವರದಿ ಎಂದು ಖಾಸಗಿ ಸಂಸ್ಥೆಯ ವರದಿಯನ್ನು ಹಂಚಿಕೊಂಡ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದ್ದು, “ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ ಬಿಜೆಪಿ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಸುಳ್ಳುಗಳ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿದೆ” ಎಂದು ಟೀಕಿಸಿದೆ.