ಕೇಂದ್ರ ಸರಕಾರದಿಂದ ಶಿಕ್ಷಣ ಕ್ಷೇತ್ರದ ಖಾಸಗೀಕರಣ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್

ಬೆಂಗಳೂರು: ರಾಜ್ಯಗಳ ಜೊತೆಗೆ ಸಮಾಲೋಚನೆ ನಡೆಸದೇ ಏಕಾಏಕಿ ವಿಶ್ವ ವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಕುಲಪತಿಗಳ ನೇಮಕ ಹಾಗೂಉನ್ನತ ಶಿಕ್ಷಣ ಸಂಸ್ಥೆಗಳ ಕುರಿತು ಹೊರಡಿಸಿರುವ ಕರಡು ನಿಯಮಾವ ಳಿಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಧ್ವನಿ ಎತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರಿಯ ಮಟ್ಟದ ಉನ್ನತ ಶಿಕ್ಷಣ ಸಚಿವರ ಸಮಾವೇಶ ನಡೆಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ.
ಕೇಂದ್ರ ಸರಕಾರ ಕುಲಪತಿಗಳ ನೇಮಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟಂತೆ ಹೊರಡಿಸಿರುವ ಯುಜಿಸಿ ಕರಡು ನಿಯಮಾವಳಿಗಳು ಅಂಗೀಕಾರವಾದರೆ ಕರ್ನಾಟಕಕ್ಕೆ ಅನ್ಯಾಯವಾಗಲಿದೆ ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ಯಾವ ರೀತಿಯ ಅನ್ಯಾಯವಾಗಲಿದೆ?
ಸುಧಾಕರ್: ಯುಜಿಸಿ ಇರುವುದು ದೇಶಾದ್ಯಂತ ಏಕರೂಪ ಶಿಕ್ಷಣ ವ್ಯವಸ್ಥೆ ಸೃಷ್ಟಿಸುವ ದೃಷ್ಟಿಯಿಂದ. ಆದರೆ ಇತ್ತೀಚೆಗೆ ಇದರಲ್ಲಿ ಕೇಂದ್ರ ಸರಕಾರದ ನೇರ ಹಸ್ತಕ್ಷೇಪವಾಗುತ್ತಿದೆ. ಯುಜಿಸಿ ಕೂಡ ತನ್ನ ಮೂಲ ಜವಾಬ್ದಾರಿಯನ್ನು ಮರೆತು ಬೇರೆ ಉದ್ದೇಶಗಳನ್ನು ರಾಜ್ಯಗಳ ಮೇಲೆ ಏರಲು ಪ್ರಯತ್ನಿಸುತ್ತಿದೆ.
ಕೇಂದ್ರ ಸರಕಾರ ಯುಜಿಸಿಯಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತಿದೆ?
ಸುಧಾಕರ್: ಕೇಂದ್ರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಏಕಾಏಕಿ ಯುಜಿಸಿ ಕರಡು ನಿಯಮಾವಳಿಗಳನ್ನು ಘೋಷಿಸಿ, ಆಕ್ಷೇಪಗಳಿದ್ದರೆ ಒಂದು ತಿಂಗಳಲ್ಲಿ ತಿಳಿಸಿ ಎಂದು ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ವಿಶ್ವವಿದ್ಯಾಲಯಗಳ ಕಾನೂನಿನ ಅಡಿ ಸ್ಥಾಪಿತವಾಗಿರುವ ವಿವಿಗಳ ಆಡಳಿತವನ್ನು ಕೇಂದ್ರ ಸರಕಾರ ನಿಯಂತ್ರಿಸುವಂತಹ ಕರಡು ಜಾರಿಗೆ ತರಲು ಮುಂದಾಗಿದ್ದಾರೆ.
ಕೇಂದ್ರ ಸರಕಾರದಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಎಷ್ಟು ರಾಜ್ಯಗಳು ಧ್ವನಿ ಎತ್ತಿವೆ?
ಸುಧಾಕರ್: ಬಿಜೆಪಿ ಆಡಳಿತ ಇರುವ ರಾಜ್ಯಗಳು ಈ ಅನ್ಯಾಯವನ್ನು ವಿರೋಧಿಸುತ್ತಿಲ್ಲ. ಆದರೂ ಎನ್ಡಿಎ ಜೊತೆಗಿರುವ ಜೆಡಿಯು, ಎಲ್ಜೆಪಿ, ಟಿಡಿಪಿ ಪಕ್ಷಗಳು ಆಕ್ಷೇಪಗಳನ್ನು ಹೊಂದಿವೆ.
ಅವು ಬಹಿರಂಗವಾಗಿ ವಿರೋಧ ಮಾಡಿಲ್ಲವಾದರೂ, ನಮ್ಮ ವಿಚಾರದೊಂದಿಗೆ ಸಹಮತ ಹೊಂದಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶ, ಕೇರಳ, ತಮಿಳುನಾಡು, ಜಾರ್ಖಂಡ್ ರಾಜ್ಯಗಳು ಸೇರಿ ಕರ್ನಾಟಕದಲ್ಲಿ ಸಮಾಲೋಚನೆ ಮಾಡಿದ್ದೇವೆ. ಅಂದು ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೂಡ ಬರಬೇಕಿತ್ತು. ಬೇರೆ ಬೇರೆ ಕಾರಣಗಳಿಂದಾಗಿ ಈ ರಾಜ್ಯಗಳು ಬರಲಿಲ್ಲ. ಆದರೆ ಕೇರಳದಲ್ಲಿ ನಡೆದ ಎರಡನೇ ರಾಷ್ಟ್ರಿಯ ಸಮ್ಮೇಳನದಲ್ಲಿ ಇನ್ನಷ್ಟು ವಿಸ್ತೃತವಾಗಿ ಚರ್ಚೆಯಾಗಿದೆ. ಒಟ್ಟು ೯ ರಾಜ್ಯಗಳು ಕೇಂದ್ರ ಸರಕಾರದ ವಿರುದ್ಧ ಇವೆ. ಮುಂದೆ ತೆಲಂಗಾಣದಲ್ಲಿ ಇನ್ನೂ ದೊಡ್ಡ ಮಟ್ಟದ ಸಮಾವೇಶ ನಡೆಸುತ್ತೇವೆ.
ಹೊಸ ಯುಜಿಸಿ ಕರಡು ನಿಯಮಾವಳಿಗಳಿಂದ ಕುಲಪತಿಗಳ ನೇಮಕಾತಿ ವಿಷಯದಲ್ಲಿ ಹೇಗೆ ಅನ್ಯಾಯವಾಗುತ್ತದೆ?
ಸುಧಾಕರ್: ರಾಜ್ಯದ ವಿವಿಗಳು ರಾಜ್ಯದ ವಿಶ್ವವಿದ್ಯಾನಿಲಯಗಳ ಕಾನೂನಿನ ಅಡಿಯಲ್ಲಿ ಸ್ಥಾಪಿತವಾಗಿವೆ. 2000 ದ ವಿವಿ ಕಾನೂನಿನ ಅಡಿ ಕುಲಪತಿಗಳನ್ನು ನೇಮಿಸಲು ರಾಜ್ಯ ಸರಕಾರ, ರಾಜ್ಯಪಾಲರು, ಯುಜಿಸಿ ಮತ್ತು ಸಿಂಡಿಕೇಟ್ ಪ್ರತಿನಿಧಿಗಳಿರುತ್ತಾರೆ. ರಾಜ್ಯ ಸರಕಾರದ ಪ್ರತಿನಿಧಿ ಅಧ್ಯಕ್ಷರಾಗಿರುತ್ತಾರೆ. ಇವರನ್ನೊಳಗೊಂಡ ಸರ್ಚ್ ಕಮ್ ಸೆಲೆಕ್ಷನ್ ಕಮಿಟಿ ಆಕಾಂಕ್ಷಿಗ
ಳನ್ನು ಸಂದರ್ಶನಕ್ಕೆ ಕರೆದು ಸೇವಾ ಹಿರಿತನ, ಸಾಮಾಜಿಕ ನ್ಯಾಯ ಮತ್ತು ಅರ್ಹತೆಯನ್ನು ಪರಿಗಣಿಸಿ ಮೂವರ ಹೆಸರನ್ನು ಕುಲಾಧಿಪತಿಗಳಿಗೆ ಅಂದರೆ ರಾಜ್ಯಪಾಲರಿಗೆ ಕಳುಹಿಸಿಕೊಡಬೇಕು. ಅವರು ಅಂತಿಮವಾಗಿ ರಾಜ್ಯ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಲಪತಿಗಳ ನೇಮಕ ಮಾಡುತ್ತಾರೆ. ಇದು ಬಹಳ ವರ್ಷಗಳಿಂದ ಯಾವುದೇ ತಕರಾರಿಲ್ಲದೆ ನಡೆದುಕೊಂಡು ಬರುತ್ತಿದೆ. ಆದರೆ ಯುಜಿಸಿ ಕರಡು ನಿಯಮಾವಳಿಗಳ ಪ್ರಕಾರ ಸರ್ಚ್ ಕಮ್ ಸೆಲೆಕ್ಷನ್ ಕಮಿಟಿಯಲ್ಲಿ ರಾಜ್ಯ ಸರಕಾರದ ಪ್ರತಿನಿಧಿ ಇರುವುದಿಲ್ಲ ಎನ್ನುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದು ದೊಡ್ಡ ಅನ್ಯಾಯ.
ಒಂದೊಮ್ಮೆ ಹೊಸ ಯುಜಿಸಿ ಕರಡು ನಿಯಮಾವಳಿಗಳ ಪ್ರಕಾರವೇ ಕುಲಪತಿಗಳ ನೇಮಕಾತಿ ಆಗುವ ವ್ಯವಸ್ಥೆ ಬಂದರೆ ಯಾವ ರೀತಿಯ ಸಮಸ್ಯೆಯಾಗುತ್ತದೆ?
ಸುಧಾಕರ್: ವಿವಿಗಳಲ್ಲಿನ ಸಮಸ್ಯೆಗಳ ಬಗ್ಗೆ ಜನ ಪ್ರಶ್ನೆ ಮಾಡುವುದು ರಾಜ್ಯ ಸರಕಾರವನ್ನು. ಕುಲಪತಿಗಳು ಸ್ಪಂದಿಸದಿದ್ದರೆ ಜನ, ಶಾಸಕರು ಕೇಳುವುದು ಸರಕಾರವನ್ನು. ರಾಜ್ಯಗಳ ಕಾಯ್ದೆ ಅನ್ವಯ ವಿವಿಗಳು ಸ್ಥಾಪನೆಯಾಗಿವೆ. ವಿವಿಗಳ ಸ್ಥಾಪನೆಗೆ ಭೂಮಿ, ಹಣ ಕೊಡುವುದು ರಾಜ್ಯ ಸರಕಾರ. ಆದರೆ ಆಡಳಿತ ಮಾತ್ರ ಕೇಂದ್ರ ಸರಕಾರದ ಪ್ರತಿನಿಧಿ ಮಾಡಬೇಕಾ? ವಿದ್ಯಾರ್ಥಿಗಳು ಏನೇ ಸಮಸ್ಯೆಯಾದರೂ ಕೇಂದ್ರ ಸರಕಾರವನ್ನು ಕೇಳಲು ಸಾಧ್ಯವಾಗುತ್ತಾ? ಆದುದರಿಂದ ಆಡಳಿತಕ್ಕೆ ಅನುಕೂಲವಾಗಲು, ಸ್ಥಳೀಯರಿಗೆ ಅನುಕೂಲವಾಗಲು ರಾಜ್ಯ ಸರಕಾರದ ಪ್ರತಿನಿಧಿ ನೇತೃತ್ವದ ಸರ್ಚ್ ಕಮಿಟಿಯಿಂದ ಶಿಫಾರಸು ಆದವರೇ ಕುಲಪತಿಗಳಾಗಬೇಕು.
ಕುಲಪತಿ ಆಗಬೇಕಾಗಿರುವವರ ಅರ್ಹತೆಯ ಬಗ್ಗೆ ಏನಿದೆ ಸಮಸ್ಯೆ?
ಸುಧಾಕರ್: ಈವರೆಗೆ ಕುಲಪತಿಗಳಾಗಿ ನೇಮಕಗೊಳ್ಳ ಬೇಕಾದವರು ಬೋಧಕರಾಗಿ ಮತ್ತು ಶಿಕ್ಷಣ ಕ್ಷೇತ್ರದ ಆಡಳಿತ ವ್ಯವಸ್ಥೆಯಲ್ಲಿ ಕನಿಷ್ಠ ೨೪ ವರ್ಷ ಕೆಲಸ ಮಾಡಿರಬೇಕು ಎನ್ನುವ ನಿಯಮ ಇದೆ. ಆದರೆ ಹೊಸ ಕರಡಿನಲ್ಲಿ ಕೇವಲ 10 ವರ್ಷ ಕೆಲಸ ಮಾಡಿದ್ದರೆ ಸಾಕು ಎಂದು ಹೇಳಲಾಗುತ್ತದೆ. ಬೇರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿರುವವರೂ ಕುಲಪತಿಗಳಾಗಿ ನೇಮಕಗೊಳ್ಳಲು ಅರ್ಹರು ಎಂದು ಹೇಳಲಾಗಿದೆ. ಕೈಗಾರಿಕೆ ನಡೆಸುವವರಿಗೆ, ವ್ಯಾಪಾರ ಮಾಡುವವರಿಗೆ ಅಥವಾ ಇನ್ನಿತರ ಕ್ಷೇತ್ರದ ಅಭ್ಯರ್ಥಿಗಳಿಗೆ ಬೋಧನೆ ಬಗ್ಗೆ, ಪರೀಕ್ಷೆ ನಡೆಸುವ ಬಗ್ಗೆ ಯಾವ ರೀತಿಯ ಅನುಭವ ಇರುತ್ತದೆ? ಇದರಿಂದ ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಆಗುವುದಿಲ್ಲವೇ? ಇದಲ್ಲದೆ ಮೊದಲಿಗೆ ಒಮ್ಮೆ ಮಾತ್ರ ಕುಲಪತಿಗಳಾಗುವ ಅವಕಾಶ ಇತ್ತು. ಅದೂ ೪ ವರ್ಷ ಮಾತ್ರ. ಆದರೆ ಹೊಸ ಕರಡಿನಲ್ಲಿ 2 ಬಾರಿ ಕುಲಪತಿಗಳಾಗುವ ಅವಕಾಶ ನೀಡಲಾಗಿದೆ. ೪ ವರ್ಷವನ್ನು ೫ ವರ್ಷ ಅಂತಾ ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ಲ್ಯಾಟರಲ್ ಎಂಟ್ರಿ ಥರ ಆಗುತ್ತದೆ. ಮುಂದೆ ಯಾರನ್ನು ಬೇಕಾದರೂ ಕುಲಪತಿಗಳನ್ನಾಗಿ ನೇಮಿಸುವುದಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹೇಗೆ?
ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಘೋಷಿಸಿರುವ ವಿವಿಗಳನ್ನು ರದ್ದು ಮಾಡುತ್ತೀರಾ?
ಸುಧಾಕರ್: ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕಾದರೆ ಕನಿಷ್ಠ 320 ಕೋಟಿ ರೂ. ಅಗತ್ಯವಿದೆ ಎಂದು ಅಧ್ಯಯನ ಹೇಳುತ್ತದೆ. ಆದರೆ ಹಿಂದಿನ ಸರಕಾರ ಪ್ರಚಾರಕ್ಕಾಗಿ ಕೇವಲ 2 ಕೋಟಿ ರೂ. ಅನುದಾನ ನೀಡಿ ವಿವಿಗಳನ್ನು ಘೋಷಣೆ ಮಾಡಿದೆ. ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ.
ವಿವಿಗಳು, ಅನುದಾನ ಬಿಡುಗಡೆ ಮತ್ತು ಅತಿಥಿ ಉಪನ್ಯಾಸಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿ ಅಧ್ಯಯನ ಮಾಡಲಾಗುತ್ತಿದೆ. ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು.
ಕೇಂದ್ರ ಸರಕಾರದ ಉದ್ದೇಶ ಏನು?
ಸುಧಾಕರ್: ಏನೋ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆ. ವಿದೇಶಗಳಲ್ಲಿ ಇರುವ ಯೋಜನೆಗಳನ್ನು ಕಾಪಿ ಪೇಸ್ಟ್ ಮಾಡುತ್ತಿದ್ದಾರೆ. ಹೀಗೆ ನಿಧಾನವಾಗಿ ಶಿಕ್ಷಣ ಕ್ಷೆತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸುಧಾರಣೆ ಹೆಸರಿನಲ್ಲಿ ಸ್ಲೋ ಪಾಯಿಸನ್ ಕೊಡುತ್ತಿದ್ದಾರೆ.
ಕೇಂದ್ರ ಸರಕಾರ ಕರಡು ನಿಯಮಾವಳಿಗಳನ್ನು ರದ್ದುಗೊಳಿಸದಿದ್ದರೆ ನಿಮ್ಮ ಮುಂದಿನ ಕಾರ್ಯಯೋಜನೆ ಏನು?
ಸುಧಾಕರ್: ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಒಂದೊಮ್ಮೆ ಕೇಂದ್ರ ಸರಕಾರ ಹಠಕ್ಕೆ ಬಿದ್ದು ಯುಜಿಸಿಯ ಹೊಸ ಕರಡನ್ನು ಜಾರಿಗೆ ತರಲು ಮುಂದಾದರೆ ಕಾನೂನಿನ ಹೋರಾಟ ಮಾಡಬೇಕಾಗುತ್ತದೆ. ಸುಪ್ರೀಂ ಕೋರ್ಟ್ಗೆ ಹೋಗಿ ನ್ಯಾಯಕ್ಕೆ ಮೊರೆಯಿಡುತ್ತೇವೆ.
ರಾಜ್ಯದ ವಿವಿಗಳಲ್ಲಿ ಉಪನ್ಯಾಸಕರ ಕೊರತೆ ದೊಡ್ಡ ಮಟ್ಟದಲ್ಲಿ ಇದೆ. ನೇಮಕಾತಿ ಬಗ್ಗೆ ನಿಮ್ಮ ಸರಕಾರದ ನಿಲುವೇನು?
ಸುಧಾಕರ್: ಇದು ಇತ್ತೀಚೆಗೆ ಉದ್ಭವವಾದ ಸಮಸ್ಯೆ ಅಲ್ಲ. ಇದರ ಬಗ್ಗೆ ಕಮಿಟಿ ರಚಿಸಲಾಗಿದೆ. ಕಮಿಟಿಯ ಶಿಫಾರಸುಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಒಂದೇ ಹಂತದಲ್ಲಿ ನೇಮಕಾತಿ ಕಷ್ಟ. ಸರಕಾರ ೨ ಹಂತದಲ್ಲಿ ನೇಮಕಾತಿ ಮಾಡುವ ಪ್ರಸ್ತಾವ ಇಟ್ಟಿದೆ. ಹಣಕಾಸು ೩ ಹಂತದಲ್ಲಿ ಎಂದು ಹೇಳಿದೆ. ವಿವರವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ಪ್ರವೇಶಾತಿಯಲ್ಲಿ ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸಲಾಗುತ್ತಿದೆ. ಆ ಮೂಲಕ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎನ್ನುವ ದೂರು ಇದೆ. ನಿಮ್ಮ ಅಭಿಪ್ರಾಯ ಏನು?
ಸುಧಾಕರ್: ಕೋವಿಡ್ ಕಾಲದಲ್ಲಿ ವೇಳಾಪಟ್ಟಿ ಏರುಪೇರಾಗಿತ್ತು. ಆದರೆ ಈಗ ಎಲ್ಲವನ್ನು ಪರಿಗಣಿಸಿ ಸಮಾನಾಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ವಿವಿಗಳಲ್ಲಿ ಏಕಕಾಲಕ್ಕೆ ಪ್ರವೇಶಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಖಾಸಗಿಯವರಿಗೆ ಅವಕಾಶ ಮಾಡಿಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
AI ಕೌಶಲ್ಯ ಕಲಿಸುವ ಬಗ್ಗೆ ಸರಕಾರದ ಯೋಚನೆ ಏನು?
ಸುಧಾಕರ್: ಇಂದು ಎಲ್ಲ ಕ್ಷೇತ್ರಗಳಲ್ಲಿ AI ಪ್ರಭಾವ ಇದೆ. ಹಾಗಂತಾ ಬೇರೆ ಶಿಕ್ಷಣಗಳು ಬೇಡ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ರೀತಿಯ ಕೌಶಲ್ಯಗಳನ್ನು ಕಲಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ಸರಕಾರ ಯೋಚನೆ ಮಾಡುತ್ತಿದೆ.