ಖಾತಾ ಹಂಚಿಕೆಯ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಪಡೆ ರಚನೆ : ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಖಾತಾ ಹಂಚಿಕೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಗಳ ಸಮನ್ವಯದಲ್ಲಿ ನಡೆದ ಸಚಿವರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಖಾತಾ ರಹಿತ ಆಸ್ತಿಗಳ ನೋಂದಣಿ ನಿಲ್ಲಿಸಲಾಗಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಲಾಯಿತು. ಜಂಟಿ ಕಾರ್ಯಪಡೆ ಅಧ್ಯಕ್ಷತೆ ವಹಿಸಿರುವ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಅವರು ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ತಿಳಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡಬೇಕು. ಖಾತಾ ವಿತರಿಸುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸಬೇಕು ಎಂದು ಕಾರ್ಯಪಡೆ ಅಧ್ಯಕ್ಷರಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪೌರಾಳಿಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.