ಪ್ರತಿಪಕ್ಷದವರು ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಪ್ರತಿಪಕ್ಷದವರು ಎಷ್ಟೇ ಚೀರಾಟ, ಹಾರಾಟ ಮಾಡಿದರೂ, ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ದಾಖಲೆ ತೋರಿಸಿ ರಾಜೀನಾಮೆ ಕೇಳಲಿ. ಅದು ಬಿಟ್ಟು ಆರೋಪ ಮಾಡಿದಾಕ್ಷಣ ರಾಜೀನಾಮೆ ಕೊಡಲು ಆಗುವುದಿಲ್ಲ ಎಂದರು.
ಬಿಜೆಪಿ ನಾಯಕರ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇವರು ಯಾವ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದಾರೆ. ನಮ್ಮ ಮನೆಗೆ ಮುತ್ತಿಗೆ ಹಾಕಲಿ, ಬೇಡ ಅಂದವರು ಯಾರು?. ಜನರು ನಗುತ್ತಿದ್ದಾರೆ. ದಾಖಲೆ ಇಲ್ಲದೆ ಯಾಕೆ ಪ್ರತಿಭಟನೆ ಮಾಡುತ್ತಾರೆ?. ಏನಂಥ ಮುತ್ತಿಗೆ ಹಾಕುತ್ತೀರಿ?. ನಿಮಗೆ ನಾಚಿಕೆ ಆಗಬೇಕು. ಮುನಿರತ್ನ ಪ್ರಕರಣದಲ್ಲಿ ಬಿಜೆಪಿಯಲ್ಲಿ ಒಂದು ನೋಟಿಸ್ ಕೊಟ್ಟಿದ್ದಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೇಲೆ ಇಂಜೆಕ್ಷನ್ ಚುಚ್ಚಲು ಹೋದರು ಎಂದು ಅವರದೇ ಪಕ್ಷದವರು ಹೇಳಿರುವುದೇಕೆ?. ಆರ್.ಅಶೋಕ್, ವಿಜಯೇಂದ್ರಗೆ ನೋಟಿಸ್ ಕೊಟ್ಟಿಲ್ಲ. ಯತ್ನಾಳ್ ಮತ್ತು ರೇಣುಕಾಚಾರ್ಯಗೆ ನೋಟಿಸ್ ಕೊಟ್ಟರೇ?. ಇವರ ಮಾತಿಗೆ ಬಿಜೆಪಿಯಲ್ಲಿ ಬೆಲೆ ಇದೆಯಾ?. ನಾನೇಕೆ ಅವರು ಹೇಳಿದಾಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗುತ್ತಿಗೇದಾರ ಸಚಿನ್ ಅವರ ಪ್ರಕರಣದ ಸತ್ಯಾಸತ್ಯತೆ ಸಂಬಂಧ ತನಿಖೆ ನಡೆಸಬೇಕೆಂದು ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಿಎಂ, ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ತನಿಖೆ ನಡೆಸುವಂತೆ ಭೇಟಿ ವೇಳೆ ಮನವಿ ಮಾಡಿದ್ದೇನೆ. ಸ್ವತಂತ್ರ ತನಿಖೆ ನಡೆಸಿದರೆ ಸೂಕ್ತವೆಂದು ಸಿಎಂ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿವಾಸಿ ಸಚಿನ್ ಪಾಂಚಾಳ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಈ ಪ್ರಕರಣದ ಬಗ್ಗೆ ಸಂಶಯ ಮೂಡುವಂತಹ ಹಲವು ವಿಷಯಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ, ಸತ್ಯಾಂಶ ತಿಳಿಯಲು ಸ್ವತಂತ್ರ ತನಿಖಾ ಸಂಸ್ಥೆಯಾದ ಅಪರಾಧ ತನಿಖಾ ವಿಭಾಗಕ್ಕೆ(ಸಿ.ಐ.ಡಿ.) ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ.’
- ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ.