ವಿಜಯೇಂದ್ರ ವಿರುದ್ಧ ಯತ್ನಾಳ್ ಫೊರ್ಜರಿ, ಸುಲಿಗೆ ಆರೋಪ | ದೂರು ಕೊಟ್ಟರೆ ಸರಕಾರದಿಂದ ತನಿಖೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಕಲಿ ಸಹಿ, ಫೋರ್ಜರಿ ಮತ್ತು ಸುಲಿಗೆಯ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಅವರು ದೂರು ನೀಡಿದರೆ ಸರಕಾರ ತನಿಖೆ ನಡೆಸಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಸಹಿಯನ್ನು ಮಗ ಬಿ.ವೈ.ವಿಜಯೇಂದ್ರ ಫೋರ್ಜರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದಾರೆ. ಇದು ಗಂಭೀರವಾದ ಆರೋಪ’ ಎಂದು ಹೇಳಿದರು.
ಬಿಜೆಪಿಯಲ್ಲಿ ನಡೆಯುತ್ತಿರುವ ಆರೋಪಗಳು ಕೇವಲ ಅವರ ಪಕ್ಷದ ಆಂತರಿಕ ವಿಷಯವಾಗಿದ್ದರೆ, ಕಾಂಗ್ರೆಸ್ ಖಂಡಿತವಾಗಿಯೂ ತಲೆ ಹಾಕುತ್ತಿರಲಿಲ್ಲ, ಆದರೆ, ಬಿಜೆಪಿ ಶಾಸಕರೊಬ್ಬರು ಅವರದೇ ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಕ್ರಿಮಿನಲ್ ಸ್ವರೂಪದ ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಿ.ವೈ.ವಿಜಯೇಂದ್ರ ಒಬ್ಬ ಭ್ರಷ್ಟ, ಸುಲಿಗೆಕೋರ ಮತ್ತು ಯಡಿಯೂರಪ್ಪ ಜೈಲಿಗೆ ಹೋಗಲು ಅವರೇ ಕಾರಣವೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡುತ್ತಾರೆ, ಅವರು ದೂರು ಕೊಟ್ಟರೆ ಎಲ್ಲ ಆಯಾಮದಲ್ಲೂ ಸರಕಾರ ತನಿಖೆ ನಡೆಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.