ರಾಜ್ಯಾದ್ಯಂತ 4,618 ಕೆರೆಗಳ ಒತ್ತುವರಿ ತೆರವುಗೊಳಿಸಿ 8,697 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯಾದ್ಯಂತ ಜಿಲ್ಲಾ ಪಂಚಾಯತಿಗಳ ಅಧೀನದಲ್ಲಿನ ಕೆರೆಗಳನ್ನು ಗುರುತಿಸುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಈವರೆಗೆ 4618 ಕೆರೆಗಳ ಒತ್ತುವರಿ ತೆರವುಗೊಳಿಸಿ 8697 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ ಕೆರೆಗಳ ಸಮೀಕ್ಷೆ ಕಾರ್ಯವನ್ನು ಎಲ್ಲ ಜಿಲ್ಲೆಗಳಲ್ಲಿ ಕೈಗೊಂಡಿದ್ದು, ಒತ್ತುವರಿಯಾಗಿದ್ದ 9,140 ಕೆರೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಪೈಕಿ 4618 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದರು.
ರಾಜ್ಯದ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ 32,648 ಕೆರೆಗಳಿದ್ದು, ಇಲಾಖೆ ಕೈಗೊಂಡಿರುವ ಸಮೀಕ್ಷೆಯಲ್ಲಿ 24,497 ಕೆರೆಗಳನ್ನು ಗುರುತಿಸಲಾಗಿದೆ, ಇವುಗಳಲ್ಲಿ 9,140 ಕೆರೆಗಳು ಒತ್ತುವರಿಗೊಂಡಿದ್ದವು. ಒತ್ತುವರಿಗೊಂಡ ಕೆರೆಗಳಲ್ಲಿ 4,618 ಕೆರೆಗಳ ಒತ್ತುವರಿಯನ್ನು ತೆರೆವುಗೊಳಿಸಲಾಗಿದ್ದು, 8,697 ಎಕರೆ ಭೂಮಿಯನ್ನು ಜಿಲ್ಲಾ ಪಂಚಾಯತಿಗಳ ವಶಕ್ಕೆ ಪಡೆದುಕೊಳ್ಳಲಾಗಿದೆ, ಒತ್ತುವರಿ ಗುರುತಿಸಲ್ಪಟ್ಟಿರುವ ಉಳಿದ 4,522 ಕೆರೆಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಒಟ್ಟಾರೆ 32,648 ಕೆರೆಗಳಲ್ಲಿ ಬಾಕಿ ಇರುವ 8,151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳೊಳಗೆ ಮುಗಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ 32,648 ಕೆರೆಗಳು 3,08,213 ಎಕರೆ ಪ್ರದೇಶವನ್ನು ಹೊಂದಿದೆ, ಇವುಗಳಲ್ಲಿ 2,15,594 ಎಕರೆಗೆ ಸಂಬಂಧಿಸಿದಂತೆ 24,497 ಕೆರೆಗಳ ಸರ್ವೆ ಕಾರ್ಯ ಸಂಪನ್ನಗೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹಾಸನ ಜಿಲ್ಲೆಯು 6,367 ಕೆರೆಗಳನ್ನು ಹೊಂದಿ ಪ್ರಥಮ ಸ್ಥಾನದಲ್ಲಿದ್ದು, ಬಳ್ಳಾರಿ ಜಿಲ್ಲೆ 21 ಕೆರೆಗಳನ್ನು ಹೊಂದಿ ಅತಿ ಕಡಿಮೆ ಸ್ಥಾನದಲ್ಲಿದೆ. ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಶಿವಮೊಗ್ಗ(4354) ಹಾಗೂ ಮೈಸೂರು(2805) ಎರಡು ಹಾಗೂ ಮೂರನೆ ಸ್ಥಾನಗಳಲ್ಲಿವೆ, ಹಾಗೆಯೇ ಅತಿ ಕಡಿಮೆ ಕೆರೆಗಳ ಮುಂದಿನ ಸ್ಥಾನಗಳು ಕಲಬುರಗಿ(33) ಮತ್ತು ಕೊಪ್ಪಳ(39) ಜಿಲ್ಲೆಗಳದು ಎಂಬ ಸಂಗತಿ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.