ಕಿಯೋನಿಕ್ಸ್ ಸರಬರಾಜುದಾರರು ದಯಾ ಮರಣ ಕೋರಲು ಬಿಜೆಪಿಯ ಭ್ರಷ್ಟಾಚಾರವೇ ಕಾರಣ : ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ತಿರುಗೇಟು
ಪ್ರಿಯಾಂಕ್ ಖರ್ಗೆ/ಶರತ್ ಬಚ್ಚೇಗೌಡ
ಬೆಂಗಳೂರು: ಬಿಜೆಪಿ ಸರಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ತಿರುಗೇಟು ನೀಡಿದ್ದಾರೆ.
ಬುಧವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭ್ರಷ್ಟಾಚಾರದೆಡೆಗಿನ ನಮ್ಮ ಸರಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರಿಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು ‘ಕಿರುಕುಳ’ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ ಎಂದು ಕಿಡಿಗಾರಿದ್ದಾರೆ.
ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಕಿಯೋನಿಕ್ಸ್ ಸಂಸ್ಥೆಯಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ಟೆಸ್ಟ್ ಆಡಿಟ್ ತಪಾಸಣೆ ವರದಿಯಲ್ಲೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ತಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಕಿಯೊನಿಕ್ಸ್ ಸಂಸ್ಥೆ ಆದೇಶ ನೀಡಿದ್ದ 1544 ಕೋಟಿ ರೂ. ಗಳಿಗೆ ಸಂಬಂಧಿಸಿದಂತೆ ಸುಮಾರು 1200 ಸಂಗ್ರಹಣೆಗಳಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯು 45 ಸಂಗ್ರಹಣೆಗಳನ್ನು ಪ್ರಾಯೋಗಿಕವಾಗಿ ಆಡಿಟ್ ತಪಾಸಣೆಗೆ ಒಳಪಡಿಸಿದ್ದು, 455 ಕೋಟಿ ರೂ. ಮೌಲ್ಯದ ಉಲ್ಲಂಘನೆಗಳು ಕಂಡು ಬಂದಿವೆ ಎಂದು ಅವರು ಹೇಳಿದ್ದಾರೆ.
2018-2023ರ ನಡುವೆ ನಡೆದ ವಹಿವಾಟುಗಳನ್ನು ಸಮಗ್ರ ತನಿಖೆಗೆ ಒಳಪಡಿಸುವ ಸಲುವಾಗಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಉಲ್ಲಂಘನೆಗಳು: ಕಂಪನಿಯು ವಿವಿಧ ಸರಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಒದಗಿಸಿದ ಹೆಚ್ಚಿನ ಸರಕುಗಳು ಮತ್ತು ಸೇವೆಗಳಿಗೆ ಮೂರನೇ ವ್ಯಕ್ತಿಯ ತಪಾಸಣೆಗಳನ್ನು ನಡೆಸದಿರುವುದು, ನಕಲಿ ಮೂರನೆ ವ್ಯಕ್ತಿಗಳನ್ನು ಬಳಸಿಕೊಂಡಿರುವುದು, ಒಪ್ಪಂದದ ಷರತ್ತುಗಳ ಉಲ್ಲಂಘನೆ, ಪಾವತಿ ಅಕ್ರಮಗಳು, ತಪ್ಪಾದ ಮೂಲ ದರವನ್ನು ಅಳವಡಿಸಿಕೊಳ್ಳುವುದು, ಎಂಪನೆಲ್ಮೆಂಟ್ ಉಲ್ಲಂಘನೆಗಳು, ಬಿಡ್ಡರ್ ಗಳು ಸಲ್ಲಿಸಿದ ಆಸಕ್ತಿಯ ಅಭಿವ್ಯಕ್ತಿ ಮೌಲ್ಯಮಾಪನಕ್ಕಾಗಿ ಮೌಲ್ಯಮಾಪನ ಸಮಿತಿಗಳನ್ನು ನೇಮಿಸದಿರುವುದು.
ಕೆಟಿಟಿಪಿ ಕಾಯಿದೆ ಉಲ್ಲಂಘಿಸಿ ಐಟಿಗೆ ಸಂಬಂಧಿಸದ ಸರಬರಾಜುಗಳ ಸಂಗ್ರಹಣೆ, ಪ್ರಮಾಣಿತ ಟೆಂಡರ್ ದಾಖಲೆಗಳನ್ನು ಅಳವಡಿಸಿಕೊಳ್ಳದಿರುವುದು, ಟೆಂಡರ್ ವಿಭಜನೆ, ಒಪ್ಪಂದಗಳಲ್ಲಿ ಕಾರ್ಯಕ್ಷಮತೆಯ ಭದ್ರತೆಯನ್ನು ಸಂಗ್ರಹಿಸದಿರುವುದು, ಬಿಡ್ಡರ್ ಗಳಿಂದ ಅರ್ನೆಸ್ಟ್ ಮನಿ ಡಿಪಾಸಿಟ್ ಸಂಗ್ರಹಿಸದಿರುವುದು ಮುಂತಾದ ಉಲ್ಲಂಘನೆಗಳು ಮೇಲ್ನೋಟಕ್ಕೆ ಕಂಡು ಬಂದಿವೆ.
ಕಿಯೊನಿಕ್ಸ್ ಸಂಸ್ಥೆಗೆ ಸಂಬಂಧಿಸಿದ ಸರಬರಾಜುದಾರರು ಹಾಗೂ ಪಾಲುದಾರರು ತಮಗೆ ಪಾವತಿಯಾಗಬೇಕಾದ ಹಣಕ್ಕೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಅವರ ಮನವಿಗಳನ್ನು ಆದ್ಯತೆಯ ಮೇಲೆ ಮತ್ತು ಲೆಕ್ಕಪರಿಶೋಧನೆಯ ಅವಲೋಕನಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹಣಕಾಸು ಇಲಾಖೆ ಮೂಲಕ ಹೊರಡಿಸಿದ 4ಜಿ ವಿನಾಯಿತಿ ಆದೇಶವನ್ನು ಪಾಲಿಸುವಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳಲ್ಲಿ ಕಿಯೊನಿಕ್ಸ್ ಸಂಸ್ಥೆಯಲ್ಲಿ ಕೆಲವು ಲೋಪಗಳು ನಡೆದಿವೆ. ಅವುಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಸ್ಪರ್ಧೆ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮುಕ್ತ ಟೆಂಡರ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಣಕಾಸು ದುರುಪಯೋಗದ ಅಂಶಗಳು ಮೇಲ್ನೋಟಕ್ಕೆ ದೃಢ ಪಟ್ಟಿರುವಾಗ ಯಾವುದೇ ತನಿಖೆಗೆ ಒಳಪಡಿಸದೆ ಪಾವತಿ ಮಾಡಬೇಕೆನ್ನುವ ಬೇಡಿಕೆಯು ನಿಯಮಬಾಹಿರವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ಹೇಳಿದ್ದಾರೆ.
‘ಪ್ರತಿ ರೂಪಾಯಿಯನ್ನೂ ಪ್ರಾಮಾಣಿಕವಾಗಿ ವಿನಿಯೋಗಿಸುತ್ತೇವೆಂಬ ಭರವಸೆಯಿಂದ ಜನತೆ ನಮ್ಮ ಸರಕಾರವನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುವುದಕ್ಕಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆಡಿಟ್ ಪರಿಶೀಲನೆಯಲ್ಲಿ ಆಕ್ಷೇಪಣೆ ಕಂಡುಬಂದಿರುವುದರಿಂದ ಸಮಗ್ರ ತನಿಖೆಯಾಗಬೇಕಿದೆ. ಕಿಯೋನಿಕ್ಸ್ ವೆಂಡರ್ಗಳಿಗೆ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿಯ ಭ್ರಷ್ಟಾಚಾರ ಕಾರಣವೇ ಹೊರತು ನಾವಲ್ಲ’
-ಪ್ರಿಯಾಂಕ್ ಖರ್ಗೆ, ಮಾಹಿತಿ ತಂತ್ರಜ್ಞಾನ ಸಚಿವ
‘ಜನರ ತೆರಿಗೆ ಹಣಕ್ಕೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ, ಅಡಿಟರ್ ಜನರಲ್ ಅವರ ಮೇಲ್ನೋಟದ ಲೆಕ್ಕಪರಿಶೋದನೆಯಲ್ಲೇ 45 ಆಕ್ಷೇಪಣೆಗಳು ಸೇರಿದಂತೆ 455 ಕೋಟಿ ರೂ.ಮೌಲ್ಯದ ಉಲ್ಲಂಘನೆಗಳನ್ನು ಉಲ್ಲೇಖಸಿದ್ದಾರೆ. ಇವುಗಳ ಸಮಗ್ರ ತನಿಖೆಯಾಗಬೇಕು, ಜನರ ಹಣವನ್ನು ಮನ ಬಂದಂತೆ ಪೋಲು ಮಾಡುವುದಕ್ಕೆ ಸಾಧ್ಯವಿಲ್ಲ’
-ಶರತ್ ಬಚ್ಚೇಗೌಡ, ಕಿಯೋನಿಕ್ಸ್ ಅಧ್ಯಕ್ಷ