ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ: ಬರಗಾಲದಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎರಡು ಸಾವಿರ ರೂ.ವರೆಗಿನ ಬರ ಪರಿಹಾರ ನೀಡುವ ಪ್ರಕ್ರಿಯೆಗೆ ಒಂದು ವಾರದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ರಾಜ್ಯದಲ್ಲಿನ ಬರಗಾಲದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡಿದ ಅವರು, ಪ್ರಸಕ್ತ ಸಾಲಿನ ಜೂನ್‍ನಲ್ಲಿ ವಾಡಿಕೆಗಿಂತ ಶೇ.57ರಷ್ಟು (ಕಡಿಮೆ), ಜುಲೈನಲ್ಲಿ ಶೇ.29ರಷ್ಟು(ಹೆಚ್ಚು), ಆಗಸ್ಟ್ ನಲ್ಲಿ ಶೇ.73ರಷ್ಟು(ಕಡಿಮೆ), ಸೆಪ್ಟಂಬರ್ ನಲ್ಲಿ ಶೇ.10ರಷ್ಟು ಹಾಗೂ ಅಕ್ಟೋಬರ್ ನಲ್ಲಿ ಶೇ.65ರಷ್ಟು ಕಡಿಮೆ ಮಳೆಯಾಯಿತು ಎಂದರು.
85.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇತ್ತು. 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು. 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟವಾಯಿತು. ಮೂರು ಹಂತಗಳಲ್ಲಿ ಕ್ರಮವಾಗಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಅದೇ ರೀತಿ ಕೇಂದ್ರ ಸರಕಾರಕ್ಕೂ ಸೆಪ್ಟಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಮೆಮೊರಂಡನ್ ಸಲ್ಲಿಸಿ ಎನ್‍ಡಿಆರ್ ಎಫ್ ಅಡಿಯಲ್ಲಿ 18,171 ಕೋಟಿ ರೂ.ಗಳ ನೆರವು ನೀಡುವಂತೆ ಕೋರಲಾಗಿದೆ. ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ರಾಜ್ಯದ 13 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿ, ರಾಜ್ಯ ಸರಕಾರ ನೀಡಿರುವ ವರದಿಯು ವಸ್ತುಸ್ಥಿತಿಯಿಂದ ಕೂಡಿದೆ ಎಂದು ಒಪ್ಪಿದೆ ಎಂದು ಅವರು ತಿಳಿಸಿದರು.
ದೇಶದ 12 ರಾಜ್ಯಗಳಿಗಿಂತ ಮುನ್ನ ನಾವು ಬರ ಘೋಷಣೆ ಮಾಡಿದ್ದೇವೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬರ ನಿರ್ವಹಣೆ, ಪರಿಹಾರ ಸಂಬಂಧ ಒಂದೇ ಒಂದು ಸಂಪುಟ ಉಪ ಸಮಿತಿ ರಚನೆ ಮಾಡಿರಲಿಲ್ಲ. ನಾವು ಸಮಿತಿ ರಚನೆ ಮಾಡಿ ಎಂಟು ಸಭೆಗಳನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.
6237 ಗ್ರಾಮಗಳು, ನಗರ ಪ್ರದೇಶಗಳಲ್ಲಿನ 914 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದೇವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ಖಾಸಗಿ ಬೋರ್‍ವೆಲ್‍ಗಳು ಹಾಗೂ ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 15 ದಿನಗಳ ಒಳಗೆ ಅವರ ಬಾಡಿಗೆಯನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಚಿತ್ರದುರ್ಗ ಹಾಗೂ ಗದಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೇವಿನ ಸಮಸ್ಯೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆ ಉಂಟಾಗಬಾರದು ಎಂದು 20 ಕೋಟಿ ರೂ.ವೆಚ್ಚದಲ್ಲಿ 7.63 ಲಕ್ಷ ರೈತರಿಗೆ ಮೇವು ಬಿತ್ತನೆ ಕಿಟ್‍ಗಳನ್ನು ಒದಗಿಸಲಾಗಿದೆ. 183 ಶಾಸಕರ ಅಧ್ಯಕ್ಷತೆ ಯಲ್ಲಿ ಟಾಸ್ಕ್ ಫೋರ್ಸ್‍ಗಳನ್ನು ರಚನೆ ಮಾಡಲಾಗಿದೆ. ಉಸ್ತುವಾರಿ ಸಚಿವರು 31 ಜಿಲ್ಲೆಗಳಲ್ಲಿ 136 ಸಭೆಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ 775.83 ಕೋಟಿ ರೂ., ತಹಶೀಲ್ದಾರ್ ಗಳ ಖಾತೆಯಲ್ಲಿ 119.23 ಕೋಟಿ ರೂ.ಗಳಂತೆ ಒಟ್ಟಂತೆ 895.06 ಕೋಟಿ ರೂ.ಇದೆ. ಇದರಲ್ಲಿ ಜಾನುವಾರುಗಳಿಗೆ ಮೇವು, ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆಯಲು, ಪೈಪ್‍ಲೈನ್ ದುರಸ್ತಿ ಮಾಡಲು ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್‍ಗಳ ವಿವೇಚನೆಯಂತೆ ಬಳಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕೇಂದ್ರ ಸರಕಾರಕ್ಕೆ ರಾಜ್ಯದ ಪರಿಸ್ಥಿತಿ ವಿವರಿಸಲು ಮುಖ್ಯಮಂತ್ರಿಗಳು ಮೂರು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾವು ಕೇಂದ್ರದ ಗೃಹ ಹಾಗೂ ಕೃಷಿ ಸಚಿವರ ಭೇಟಿಗೆ ಅವಕಾಶ ಕೋರಿದರೆ ಕಾಲಾವಕಾಶ ಸಿಕ್ಕಿಲ್ಲ. ನಾವು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿ ಬರುವಂತಾಗಿದೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ತನ್ನ ಮಾನದಂಡಗಳ ಅನುಸಾರ ರಾಜ್ಯದಲ್ಲಿ ಶೇ.44ರಷ್ಟು ಸಣ್ಣ, ಅತಿಸಣ್ಣ ರೈತರು ಇರುವುದಾಗಿ ಭಾವಿಸಿದೆ. ಆದರೆ, ನಮ್ಮ ಮಾಹಿತಿಯ ಪ್ರಕಾರ ಶೇ.70ರಷ್ಟು ಸಣ್ಣ, ಅತಿಸಣ್ಣ ರೈತರು ಇದ್ದಾರೆ. ಆಧಾರ್ ಜೋಡಣೆಯೊಂದಿಗೆ ಇರುವ ಈ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ. ಎನ್‍ಡಿಆರ್ ಎಫ್ ಅಡಿಯಲ್ಲಿ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸುವಂತೆಯೂ ಮನವಿ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ರಾಜ್ಯ ಸರಕಾರದ ವತಿಯಿಂದಲೆ 2 ಸಾವಿರ ರೂ.ವರೆಗಿನ ಬರ ಪರಿಹಾರವನ್ನು ವಿತರಿಸುವ ಪ್ರಕ್ರಿಯೆಗೆ ಈ ವಾರದಲ್ಲಿ ಚಳ್ಳಕೆರೆಯಲ್ಲಿ ಚಾಲನೆ ನೀಡಲಾಗುವುದು. ಕೇಂದ್ರ ಸರಕಾರವು ನಮ್ಮ ನೆರವಿಗೆ ಬಂದಿದ್ದರೆ ಪರಿಸ್ಥಿತಿ ಈ ರೀತಿ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.