ವಕ್ಫ್ ಆಸ್ತಿಗಳ ಸದ್ಬಳಕೆಯಿಂದ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಝಮೀರ್ ಅಹ್ಮದ್ ಖಾನ್
ಬೆಂಗಳೂರು: ರಾಜ್ಯದಲ್ಲಿ 1.11 ಲಕ್ಷ ಎಕರೆ ವಕ್ಫ್ ಆಸ್ತಿಯಿದೆ. ಈ ಪೈಕಿ ನಮ್ಮ ಬಳಿಯಿರುವುದು ಕೇವಲ 23 ಸಾವಿರ ಎಕರೆ ಮಾತ್ರ. ಖಬರಸ್ಥಾನ್‍ಗಳು ಹೊರತುಪಡಿಸಿದರೆ ಸರಕಾರದಿಂದ ಒಂದು ಇಂಚು ಜಾಗವನ್ನು ನಾವು ಪಡೆದಿಲ್ಲ. ವಕ್ಫ್ ಆಸ್ತಿಗಳನ್ನು ಸದ್ಭಳಕೆ ಮಾಡಿದರೆ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶುಕ್ರವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್ ಆವರಣದಲ್ಲಿ ಮೂರು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹಮೀದ್ ಶಾ ಕಾಂಪ್ಲೆಕ್ಸ್ ನಗರದ ಹೃದಯ ಭಾಗದಲ್ಲಿದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಬೇಡಿಕೆ ಹೆಚ್ಚಿದೆ. ಸದ್ಯ ಈ ಕಾಂಪ್ಲೆಕ್ಸ್‍ನಲ್ಲಿ ವಾಹನಗಳ ನಿಲುಗಡೆಯಿಂದ ಮಾಸಿಕ 1.20 ಲಕ್ಷ ರೂ.ಆದಾಯ ಬರುತ್ತಿದೆ. ನೂತನ ವಾಹನ ನಿಲ್ದಾಣ ನಿರ್ಮಾಣದ ಬಳಿಕ ಆದಾಯ ಕನಿಷ್ಠ 4 ರಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳವಾಗಬಹುದು ಎಂದು ಅವರು ಹೇಳಿದರು.
ವಾಹನ ನಿಲ್ದಾಣದ ಜೊತೆಗೆ ಉತ್ತಮವಾದ ಸಭಾಂಗಣ ನಿರ್ಮಾಣ ಮಾಡಬೇಕು ಎಂಬ ಆಲೋಚನೆ ಈ ಕಾಂಪ್ಲೆಕ್ಸ್ ನ ಆಡಳಿತ ಸಮಿತಿಯ ಆಡಳಿತಾಧಿಕಾರಿ ಜಿ.ಎ.ಬಾವ ಅವರಲ್ಲಿದೆ. ಆದರೆ, ಸಭಾಂಗಣದ ಬದಲಾಗಿ ಕಲ್ಯಾಣ ಮಂಟಪ ನಿರ್ಮಿಸಿದರೆ ಬಡವರಿಗೆ ಹೆಚ್ಚಿನ ಅನುಕೂಲ ಆಗಬಹುದು. ಈ ಬಗ್ಗೆ ವಿಚಾರ ಮಾಡಿ ಎಂದು ಝಮೀರ್ ಅಹ್ಮದ್ ಖಾನ್ ಸಲಹೆ ನೀಡಿದರು.
ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಹಾಗೂ ಈಗ ಆಡಳಿತಾಧಿಕಾರಿಯಾಗಿ ಜಿ.ಎ.ಬಾವ ಉತ್ತಮ ಕೆಲಸ ಮಾಡಿದ್ದಾರೆ. ಅದರ ಪರಿಣಾಮವಾಗಿಯೇ ಈ ಹಿಂದೆ ಬರುತ್ತಿದ್ದ ಬಾಡಿಗೆ ಮೊತ್ತ ವಾರ್ಷಿಕ 88 ಲಕ್ಷ ರೂ.ಗಳಿಂದ 3.60 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಉದ್ಯೋಗಸ್ತ ಮಹಿಳೆಯರಿಗೆ ಹಾಸ್ಟೆಲ್, ಐಟಿಐ ಕಾಲೇಜಿಗೆ ಪ್ರತ್ಯೇಕ ಕಟ್ಟಡ, ರಕ್ತ ನಿಧಿ, ಉಚಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಂತ್ರಿಕ ಸಮಸ್ಯೆಯಿಂದ ಡಯಾಲಿಸಿಸ್ ಕೇಂದ್ರ ಬಿಜೆಪಿ ಸರಕಾರದ ಅವಧಿಯಲ್ಲಿ ಸ್ಥಗಿತವಾಗಿತ್ತು. ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜೊತೆ ಚರ್ಚಿಸಿ, ಬಡವರಿಗೆ ಅನುಕೂಲವಾಗುವ ಈ ಡಯಾಲಿಸಿಸ್ ಕೇಂದ್ರ ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಭರವಸೆ ನೀಡಿದರು.
ವಕ್ಫ್ ಬೋರ್ಡ್ ವತಿಯಿಂದ 47 ಕೋಟಿ ರೂ.ವೆಚ್ಚದಲ್ಲಿ 15 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಪಿಯು ಕಾಲೇಜು ಆರಂಭ ಮಾಡಲಾಗುವುದು. ಪ್ರತಿ ಜಿಲ್ಲೆಗೆ ಒಂದು ಐಸಿಯು, ವೆಂಟಿಲೇಟರ್ ಸಹಿತ ಆಂಬ್ಯುಲೆನ್ಸ್, ಫ್ರೀಝರ್‍ಗಳನ್ನು ನೀಡಲಾಗುವುದು. ಅಲ್ಲದೇ, ಈ ವರ್ಷ ಸುಮಾರು 5 ಸಾವಿರ ಆಯ್ದ ಮದ್ರಸಾ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನ ಮಕ್ಸೂದ್ ಇಮ್ರಾನ್ ದುಆ ಮಾಡಿದರು. ಹಝ್ರತ್ ಹಮೀದ್ ಶಾ ಕಾಂಪ್ಲೆಕ್ಸ್ ನ ಆಡಳಿತಾಧಿಕಾರಿ ಜಿ.ಎ.ಬಾವ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ, ಸದಸ್ಯರಾದ ಆರ್.ಅಬ್ದುಲ್ ರಿಯಾಝ್ ಖಾನ್, ಎನ್.ಕೆ.ಎಂ.ಶಾಫಿ ಸಅದಿ, ಯಾಕೂಬ್, ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.