ಸಿಎಂ ವಿರುದ್ಧ ಪ್ರಾಸಿಕ್ಯೂಷನ್ | ರಾಜ್ಯಪಾಲರ ನಡೆ ಖಂಡಿಸಿ ʼಅಹಿಂದ ಸಂಘಟನೆ’ಯಿಂದ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ
ಬೆಂಗಳೂರು : ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ‘ಕಾನೂನು ಕ್ರಮಕ್ಕೆ ಅನುಮತಿ’ ನೀಡಿರುವುದನ್ನು ಖಂಡಿಸಿ ಅಹಿಂದ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಅಹಿಂದ ಸಂಘಟನೆ ಸಂಚಾಲಕ ಎನ್. ವೆಂಕಟೇಶ್‍ಗೌಡ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಬಡ ಸಮುದಾಯಗಳ ಶಕ್ತಿಯನ್ನು ಕುಂದಿಸಬೇಕೆನ್ನುವ ದುರುದ್ದೇಶ ಮತ್ತು ಬಡ ಸಮುದಾಯಗಳನ್ನು ಸಹಿಸದ ಮನುವಾದಿಗಳು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು, ರಾಜ್ಯಪಾಲ ಈ ಅನುಮತಿ ನೀಡಿರುವುದು ಸಂವಿಧಾನ ಮತ್ತು ಕಾನೂನು ಬಾಹಿರ, ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಮುಸ್ಲಿಮ್, ಕ್ರೈಸ್ತ, ಬೌದ್ಧ ಧರ್ಮಿಯರು, ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳು ಹೀಗೆ ಒಟ್ಟು ಜನಸಂಖ್ಯೆಯ ಪೈಕಿ ಶೇ.82ರಷ್ಟು ಜನಸಂಖ್ಯೆಯನ್ನು ಅಹಿಂದ ಸಂಘಟನೆ ಹೊಂದಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ಯಾವುದೇ ರೀತಿ ಪಾತ್ರ ಇರುವುದಿಲ್ಲ. ಈ ಕುರಿತು ಸಾಕ್ಷ್ಯಾಧಾರಗಳು ಇಲ್ಲ. ಇದೆಲ್ಲವೂ ಮನುವಾದಿಗಳ ಷಡ್ಯಂತ್ರ. ಈ ಮನವಿಯನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಿ.ಜೆ.ಅಬ್ರಹಾಂ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿರುವ ಕೆಸರೆ ಗ್ರಾಮ, ಮೈಸೂರು ತಾಲೂಕು/ಜಿಲ್ಲೆಯ 3.16 ಎಕರೆ ಜಮೀನು ‘ಕ್ರಯಪತ್ರ’ ಮತ್ತು ‘ದಾನಪತ್ರ’ಗಳಲ್ಲಿ ಇರಬಹುದಾದ ಲೋಪಗಳನ್ನು ಯಾವಾಗಬೇಕಾದರೂ ಸರಿಪಡಿಸಿದ ಪತ್ರ ಮಾಡಲು ಅವಕಾಶವಿರುತ್ತದೆ. ಮುಡಾ ಮಂಜೂರು ಮಾಡಿರುವ ಪರಿಹಾರ ಭೂ ಹಂಚಿಕೆ ಕ್ರಮಗಳ ಕಾನೂನು ಅಂಶಗಳನ್ನು ನಿವೃತ ನ್ಯಾಯಾದೀಶರ ತನಿಖೆಗೆ ಆದೇಶವಾಗಿದೆ. ತನಿಖಾ ವರದಿ ಬಾಕಿಯಿದೆ ಎಂದು ವೆಂಕಟೇಶ್‍ಗೌಡ ಮಾಹಿತಿ ನೀಡಿದ್ದಾರೆ.