ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
ಬೆಂಗಳೂರು: ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ ದಿಲ್ಲಿ ಚಲೋ ಹೋರಾಟ ಮೂಲಕ ನಾಟಕವನ್ನಾಡಿ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಈ ವೇಳೆ ವಿಧಾನಸೌಧ ಮುತ್ತಿಗೆಗೆ ಮುಂದಾದ ಹಿನ್ನೆಲೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಬುಧವಾರ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಬಿಜೆಪಿ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳ ಜೊತೆಗೆ ಜನರಿಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಿದೆ. ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ ಬೀಗ ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ದಿಲ್ಲಿಗೆ ಮಜಾ ಮಾಡಲು ಹೋಗಿದ್ದು, ವಿಧಾನಸೌಧ ಖಾಲಿಯಾಗಿ ಅಧಿಕಾರಿಗಳಿಗೆ ಕೆಲಸವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ ಶೇ.30ರಷ್ಟು ಕಾವೇರಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ 8 ಟಿಎಂಸಿ ನೀರು ಹೆಚ್ಚುವರಿಯಾಗಿತ್ತು. ಆದರೆ ಈಗ ತಮಿಳುನಾಡಿನ ಬ್ರದರ್ ಗಳಿಗೆ ನೀರು ನೀಡಲಾಗಿದೆ. ಬರಗಾಲದ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಐದು ಗ್ಯಾರಂಟಿಯ ಜೊತೆಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಒಂದೊಂದು ಗ್ಯಾರಂಟಿಗೂ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ಪಂಗನಾಮ ಹಾಕಲಾಗಿದೆ. ಈ ನಾಮದ ಗ್ಯಾರಂಟಿಯನ್ನು ಎಲ್ಲರಿಗೂ ತಲುಪಿಸಲು 80 ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಬರಕ್ಕೆ 100 ಕೋಟಿ ನೀಡುತ್ತೇನೆಂದು ಹೇಳಿ, ಶಾಸಕರಿಗಾಗಿ 300-400 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮುಸ್ಲಿಮರ ಕಲ್ಯಾಣಕ್ಕೆ 1 ಸಾವಿರ ಕೋಟಿ ರೂ. ನೀಡಿ, ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಬಂದಿದೆ ಎಂದು ಆಪಾದಿಸಿದರು.
ಕೈಗಾರಿಕೆಗೆ ವಿದ್ಯುತ್ ನೀಡದೆ ಸಣ್ಣ ಉದ್ಯಮಗಳು ಸ್ಥಗಿತಗೊಳ್ಳುತ್ತಿವೆ. ರೈತರಿಗೆ ಏಳು ಗಂಟೆ ವಿದ್ಯುತ್ ಎಂದು ಹೇಳಿ ಎರಡು ಗಂಟೆಯೂ ನೀಡುತ್ತಿಲ್ಲ. ಸರಕಾರದಲ್ಲೇ ವೋಲ್ಟೇಜ್ ಇಲ್ಲವಾಗಿದೆ. ಒಂಬತ್ತು ತಿಂಗಳಿಂದ ಶಾಸಕರು ಅಭಿವೃದ್ಧಿಯ ಅನುದಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಗೂಂಡಾ ಸರಕಾರವಿದೆ. ಎಲ್ಲರೂ ವೈಯಕ್ತಿಕ ಹಿತಾಸಕ್ತಿಗಾಗಿ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯ ಎನ್. ರವಿಕುಮಾರ್, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪ್ರಮುಖರಿದ್ದರು.