‘ಹಿಂದಿ ದಿವಸ್’ ವಿರೋಧಿಸಿ ಸೆ.13ಕ್ಕೆ ‘ಬ್ಯಾಂಕ್, ಅಂಚೆ ಕಚೇರಿಗಳಿಗೆ ಪ್ರತಿಭಟನೆ ಪತ್ರ’
ಸಾಂದರ್ಭಿಕ ಚಿತ್ರ (news18)
ಬೆಂಗಳೂರು: ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಕೇಂದ್ರ ಸರಕಾರವು ಎಲ್ಲ ಹಂತದಲ್ಲಿ ಹಿಂದಿ ಭಾಷಾ ಹೇರಿಕೆಯನ್ನು ವಿರೋಧಿಸಿ ‘ಹಿಂದಿ ಹೇರಿಕೆ ವಿರೋಧಿ-ಕರ್ನಾಟಕ’ವು ರಾಜ್ಯದಲ್ಲಿ ಜನಾಂದೋಲನಕ್ಕೆ ನಿರ್ಧರಿಸಿದೆ.
ಸೋಮವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿನ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಸೆ.14ರಂದು ಕೇಂದ್ರ ಸರಕಾರ ನಡೆಯಲು ಉದ್ದೇಶಿಸಿರುವ ‘ಹಿಂದಿ ದಿವಸ್’ ಅನ್ನು ವಿರೋಧಿಸಿ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ. ‘ಕರ್ನಾಟಕದಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರಗಳು, ಅರ್ಜಿ ಫಾರಂಗಳು, ಚಲನ್ಗಳು, ಡಿಜಿಟಲ್ ಬೋರ್ಡ್ಗಳು, ನಾಮಫಲಕಗಳು, ಎಟಿಎಂ ಮೆಷಿನ್ಗಳು, ಘೋಷಣೆಗಳು, ಎಸ್ಎಂಎಸ್ ಸಂದೇಶಗಳು, ಸಾರ್ವಜನಿಕ ಪ್ರಕಟಣೆಗಳಲ್ಲಿ ಹಿಂದಿ ಭಾಷೆಯನ್ನು ಬಳಸಕೂಡದು ಎಂದು ಆಗ್ರಹಿಸಲಾಗಿದೆ.
ಹಿಂದಿ ಭಾಷೆಯು ಕನ್ನಡ ಭಾಷೆಗೆ ಅಥವಾ ಕರ್ನಾಟಕಕ್ಕೆ ಯಜಮಾನ ಭಾಷೆಯಲ್ಲ. ಕನ್ನಡ ಭಾಷೆ ತಿಳಿಯದವರನ್ನು ಕರ್ನಾಟಕದ ಶಾಖೆಗಳಲ್ಲಿ ಕೆಲಸ ಮಾಡಲು ನಿಯೋಜಿಸಬಾರದು. ಹಿಂದಿ ದಿವಸ್ ಆಚರಣೆ, ಹಿಂದಿ ಕಲಿಕೆಗೆ ಪ್ರೋತ್ಸಾಹ ಮುಂತಾದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಚಟುವಟಿಕೆಗಳನ್ನು ಮುಂದುವರೆಸಕೂಡದು ಎಂದು ಒತ್ತಾಯಿಸಲಾಗಿದೆ.
ಕರ್ನಾಟಕ ಭೌಗೋಳಿಕ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಪ್ರತ್ಯೇಕ ನೇಮಕಾತಿ ನಿಯಮ ರೂಪಿಸಿ, ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಮೂಲಕ ಭರ್ತಿ ಮಾಡಬೇಕು. ಕರ್ನಾಟಕ ಜನತೆಯು ಶ್ರಮದಿಂದ ಕಟ್ಟಿ ಬೆಳೆಸಿರುವ ಬ್ಯಾಂಕ್ಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜತೆ ವಿಲೀನಗೊಳಿಸುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ಗಳು ವಿಲೀನ ರದ್ದುಪಡಿಸಿ ಅವನ್ನು ಕನ್ನಡಿಗರಿಗೆ ಹಿಂದಿರುಗಿಸಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸುವುದಾಗಿ ಹಾಗೂ ಹಿಂದಿ ಹೇರಿಕೆ ಮಾಡದಿರುವ ಬಗ್ಗೆ ಇಲ್ಲಿನ ನಾಗರಿಕರಿಗೆ ಖಚಿತಪಡಿಸಲು ಒಂದು ಬಹಿರಂಗ ಪ್ರಕಟಣೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
‘ಹಿಂದಿ ದಿವಸ್’ ಆಚರಣೆಯನ್ನು ವಿರೋಧಿಸಿ ಸೆ.13ಕ್ಕೆ ಬೆಂಗಳೂರು ನಗರ ಜಿಲ್ಲಾ ಕಸಾಪ ವತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಪ್ರತಿಭಟನೆ ಪತ್ರ ಸಲ್ಲಿಕೆಗೆ ತೀರ್ಮಾನಿಸಲಾಗಿದೆ. ಅಲ್ಲದೆ, ಇದೇ ವೇಳೆ RBI ಮತ್ತು ಎಸ್ಬಿಐ ವಿಭಾಗೀಯ ಕಚೇರಿಗಳ ಮುಖ್ಯಸ್ಥರಿಗೆ ಎಲ್ಲ ಹಂತದಲ್ಲಿಯೂ ಕನ್ನಡ ಭಾಷೆಯನ್ನೆ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಮನವಿ ಸಲ್ಲಿಸಲಾಗುವುದು ಎಂದು ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ತಿಳಿಸಿದೆ.
ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡಪರ ಹೋರಾಟಗಾರ ಶೇ.ಭೋ. ರಾಧಾಕೃಷ್ಣ, ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಕಸಾಪ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
‘ಕೇಂದ್ರ ಸರಕಾರದ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ. ಹಿಂದಿ ಭಾಷೆಗೆ ಪ್ರಾತಿನಿಧ್ಯ ನೀಡುವ ಅಗತ್ಯವಿಲ್ಲ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಕಡೆಗಣನೆ ಮೂಲಕ ‘ಕನ್ನಡ ದೇಶ’ ಆಗಲಿಕ್ಕೆ ಕೇಂದ್ರ ಸರಕಾರವೇ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕನ್ನಡ ಭಾಷೆಯೂ ರಾಷ್ಟ್ರ ಭಾಷೆಯೇ ಇದರಲ್ಲಿ ಯಾವುದೇ ಸಂಶಯವು ಬೇಡ’
-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ