ಪ್ರತಿಭಟನೆಗಳು ಫ್ರೀಡಂ ಪಾರ್ಕ್‌ಗೆ ಸೀಮಿತ; ನಿಯಮ ಹಿಂಪಡೆಯಲು ಒತ್ತಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ ಫ್ರೀಡಂ ಪಾರ್ಕ್‌ಗೆ ಸೀಮಿತವಾಗಿದ್ದು, ಇದು ಪ್ರತಿಭಟಿಸುವ ಹಕ್ಕಿಗೆ ಧಕ್ಕೆಯಾಗಿದೆ. ಈ ಮೂಲಭೂತ ಹಕ್ಕನ್ನು ಎತ್ತಿಹಿಡಿಯಬೇಕಾಗಿದೆ. ಎಲ್ಲ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ಸೀಮಿತಗೊಳಿಸದಿರಿ. ಸರ್ಕಾರ ಈ ನಿಯಮವನ್ನು ಹಿಂಪಡೆಯದಿದ್ದರೆ, ಅದನ್ನು ಉಲ್ಲಂಘಿಸಿ ಪ್ರತಿಭಟಿಸುತ್ತೇವೆ ಎಂದು ʼಹೋರಾಟದ ಹಕ್ಕಿಗಾಗಿ ಜನಾಂದೋಲನʼ ತಿಳಿಸಿದೆ.
ಪ್ರತಿಭಟನೆಯ ಹಕ್ಕನ್ನು ರಕ್ಷಿಸಲು, ಎತ್ತಿಹಿಡಿಯಲು ಹಲವಾರು ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಗುಂಪುಗಳು ಹಾಗೂ ವ್ಯಕ್ತಿಗಳು ಸೇರಿ ಹೋರಾಟದ ಹಕ್ಕಿಗಾಗಿ ಜನಾಂದೋಲನವನ್ನು ಪ್ರಾರಂಭಿಸಿದ್ದಾರೆ.
“ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಆಡಳಿತದಿಂದ ತರಲಾದ ‘ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021’ (Licensing and Regulation of Protests, Demonstrations and Protest Marches (Bengaluru City) Order, 2021) ಅನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಪ್ರತಿಭಟನೆಯ ಮೂಲಭೂತ ಹಕ್ಕನ್ನು ಚಲಾಯಿಸಿದ ಕಾರ್ಮಿಕರು, ರೈತರು, ದಲಿತ ಸಂಘಟನೆ ಕಾರ್ಯಕರ್ತರು ಮಹಿಳೆಯರು ಮತ್ತು ಇತರ ಶೋಷಿತ ಸಮುದಾಯಗಳಿಗೆ ಸೇರಿದವರ ಮೇಲೆ, ಪ್ರತಿಭಟನೆ ನಡೆಸಿದ ಕಾರಣಕ್ಕೆ ದಾಖಲಿಸಲಾದ ಎಲ್ಲ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಜನಾಂದೋಲನ ಸರ್ಕಾರಕ್ಕೆ ಒತ್ತಾಯಿಸಿದೆ.
“ಅಕ್ಟೋಬರ್ 2 ರೊಳಗೆ ಈ ನಿಯಮವನ್ನು ಹಿಂತೆಗೆದುಕೊಳ್ಳದಿದ್ದರೆ, ಅಕ್ಟೋಬರ್ 2 ರಂದು, ಕಾರ್ಮಿಕ ಸಂಘಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಎಲ್‌ಜಿಬಿಟಿಕ್ಯೂಐಎ (LGBTQIA) ಸಂಘಟನೆಗಳು ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳು ಎಂ.ಜಿ. ರಸ್ತೆಯಲ್ಲಿನ ಗಾಂಧೀಜಿ ಪ್ರತಿಮೆಯಿಂದ ವಿಧಾನಸೌಧದ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪ್ರತಿಭಟನೆಯ ಹಕ್ಕಿಗಾಗಿ ಹೋರಾಡುತ್ತೇವೆ” ಎಂದು ಸರ್ಕಾರಕ್ಕೆ ʼಹೋರಾಟದ ಹಕ್ಕಿಗಾಗಿ ಜನಾಂದೋಲನʼ ಎಚ್ಚರಿಕೆ ನೀಡಿದೆ.