ಪ್ರಚೋದನಕಾರಿ ಹೇಳಿಕೆ ಆರೋಪ: ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ವಿರುದ್ಧ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು
ಮೈಸೂರು,ಸೆ.10: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರುಗಳು ಸಾರ್ವಜನಿಕವಾಗಿ ಕೋಮು ಸಂಘರ್ಷ ಹೇಳಿಕೆ ನೀಡಿದ್ದು, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ 'ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ' ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದೆ.
ಸೆಪ್ಟಂಬರ್ 8 ರಂದು ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮ ಹೇಳಿಕೆ ನೀಡುವ ಸಂದರ್ಭದಲ್ಲಿ ''ಮಹಿಷ ದಸರಾ ಆಚರಣೆ ನಡೆಯಲು ಬಿಡುವುದಿಲ್ಲ, ಒಂದು ವೇಳೆ ಮಹಿಷ ದಸರಾ ಆಚರಣೆ ಮಾಡಲು ಮುಂದಾದರೆ ಸಂಘರ್ಷ ನಡೆಸಲು ಸಿದ್ಧರಿರಬೇಕು'' ಎಂದು ಎಲ್ಲರನ್ನೂ ಹುರಿದುಂಬಿಸಿ ಕೋಮು ಭಾವನೆಯನ್ನುಂಟು ಮಾಡಿದ್ದಾರೆ. ಅದೇ ರೀತಿ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಸಹ ಮಾತನಾಡಿ, ''ಮಹಿಷ ದಸರಾ ಆಚರಣೆಯನ್ನು ತಡೆಯಲು ಈಗಾಗಲೇ ರೂಪುರೇಷ ತಯಾರು ಮಾಡಿರುತ್ತೇವೆ. ಯಾವ ರೀತಿಯಲ್ಲಿ ಮಹಿಷ ದಸರಾ ಮಾಡುತ್ತಾರೊ ನೋಡೋಣ ''ಎಂಬುದಾಗಿ ಸಾರ್ವಜನಿಕವಾಗಿ ಕರೆ ನೀಡುರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
''ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಶ್ರೀವತ್ಸರವರು ಕೋಮುಭಾವನೆಗೆ ಧಕ್ಕೆಯನ್ನುಂಟು ಮಾಡುವ ಪಿತೂರಿಯಿಂದ ಈ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಚಾರ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟಾಗಿ ಕೋಮು ಸೌಹಾರ್ದತೆ ಹಾಳಾಗುತ್ತಿರುವುದು ಕಂಡು ಬಂದಿರುತ್ತದೆ. ಸಾರ್ವಜನಿಕವಾಗಿ ಕೋಮು ಭಾವನೆ ಉಂಟು ಮಾಡಿ, ಧರ್ಮ ಧರ್ಮಗಳ ವಿರುದ್ಧ ಮತ್ತು ಜಾತಿ ಜಾತಿಗಳ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟುವ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿರುವ ಸಂಸದ ಪ್ರತಾಪ್ ಸಂಹ ಹಾಗೂ ಶಾಸಕ ಶ್ರೀವತ್ಸ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು'' ಎಂದು ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಸೇರಿದಂತೆ ಸಮಿತಿಯ ಸದಸ್ಯರು ದೂರಿನಲ್ಲಿ ಒತ್ತಾಯಿಸಿದ್ದಾರೆ.