ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಚೋದನಾಕಾರಿ ಹೇಳಿಕೆ: ಪ್ರಮೋದ್ ಮುತಾಲಿಕ್ ವಿರುದ್ಧ ಎಫ್‌ಐಆರ್
ಹುಬ್ಬಳ್ಳಿ, ಸೆ. 21: ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದಡಿ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾನಗರ ಪಾಲಿಕೆ 8 ವಲಯದ ಸಹಾಯ ಆಯುಕ್ತ ಚಂದ್ರಶೇಖರಗೌಡ ಎಂಬುವವರು ನೀಡಿದ ದೂರಿನ ಅನ್ವಯ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕಲಂ 153(ಎ), 295(ಎ) ಐಪಿಸಿ ಅಡಿ ಮುತಾಲಿಕ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ ಈದ್ಗಾ ಮೈದಾನ
ಇಂದು (ಗುರುವಾರ) ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ವಿಸರ್ಜನೆ ವೇಳೆ ಮೈದಾನಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುತಾಲಿಕ್, ʼʼಹಿಂದೂ ಸಮಾಜವನ್ನು ಕೆಣಕಿದರೆ ನಾವು ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ. ಮಸೀದಿಯಲ್ಲಿ ಗಣೇಶ ಕೂರಿಸುವ ತಾಕತ್ತು ನಮಗಿದೆ. ನಾವು 100 ಕೋಟಿ ಹಿಂದೂಗಳಿದ್ದೇವೆ. ಅಂಜುಮನ್ ಕೋರ್ಟ್ಗೆ ಹೋಗುತ್ತೇವೆ ಅನ್ನೋದು ಸರಿ ಅಲ್ಲ. ನಿಮ್ಮ ಸೊಕ್ಕು ಸರಿ ಅಲ್ಲ. ಇದೇನು ಪಾಕಿಸ್ತಾನ ಅಲ್ಲ, ಅಪಘಾನಿಸ್ತಾನ ಅಲ್ಲ. ಇದು ನಮ್ಮ ನೆಲ, ಮೈದಾನ ಪಾಲಿಕೆ ಆಸ್ತಿ ಎಂದು ಹೇಳಿದೆ. ಅಕಸ್ಮಾತ್ ನೀವು ಕೋರ್ಟ್ಗೆ ಹೋಗುತ್ತೆನೆ ಅನ್ನೋದೇ ಆದರೆ ನಾವು ನಮಾಝ್ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತುತ್ತೇವೆʼʼ ಎಂದೆಲ್ಲಾ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು.