ಪ್ರಚೋದನಕಾರಿ ಹೇಳಿಕೆ ಆರೋಪ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಡಿಜಿಪಿಗೆ ದೂರು
ಬೆಂಗಳೂರು, ಅ.5: ಮಾಜಿ ಕೇಂದ್ರ ಸಚಿವ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಅತ್ಯಂತ ಕೀಳು ಪದವನ್ನು ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ. ಅಲ್ಲದೆ ಶಿವಮೊಗ್ಗದ ರಾಗಿಗುಡ್ಡದ ಘಟನೆ ಬಗ್ಗೆ ಹಿಂದೂ-ಮುಸ್ಲಿಮ್ ಧರ್ಮದ ನಡುವೆ ಕೋಮುದ್ವೇಷ ಹರಡುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರತಿ ವಿಷಯದಲ್ಲೂ ಯತ್ನಾಳ್ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸ್ ನಾಯಕರುಗಳ ವಿರುದ್ಧ ಟೀಕಿಸುವಾಗ ಪಾಕಿಸ್ತಾನ, ತಾಲಿಬಾನ್, ಟಿಪ್ಪುಸುಲ್ತಾನ್ ಹಾಗೂ ಮುಸ್ಲಿಮ್ ಸಮುದಾಯದ ಹೆಸರನ್ನು ಪ್ರಸ್ತಾಪಿಸಿ ಪ್ರಚೋದನೆ ಮಾಡುತ್ತಿದ್ದಾರೆ. ಇದು ಶಾಂತಿ ಕದಡುವ ಗಂಭೀರ ಹೇಳಿಕೆಗಳಾಗಿದ್ದು, ಕೂಡಲೇ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರದ ಮೂಲಕ ಎಸ್.ಮನೋಹರ್ ಒತ್ತಾಯಿಸಿದ್ದಾರೆ.