ಪಿಎಸ್ಸೈ ಮರುಪರೀಕ್ಷೆ ದಿನಾಂಕ ನಿಗದಿ: ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳೇನು?
ಸಾಂದರ್ಭಿಕ ಚಿತ್ರ
ಬೆಂಗಳೂರು: ಪಿಎಸ್ಸೈ (ಪುರುಷ & ಮಹಿಳಾ) ನೇರ ನೇಮಕಾತಿಯ ಮರುಪರೀಕ್ಷೆಗೆ ಜ. 23 ಕ್ಕೆ ದಿನಾಂಕ ಪ್ರಕಟಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ. ಜನವರಿ 23ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12ರ ವರೆಗೆ ಪೇಪರ್ 1 ಹಾಗೂ ಮಧ್ಯಾಹ್ನ 1 ರಿಂದ 2.30ರ ವರೆಗೆ ಪೇಪರ್ 2ರ ಪರೀಕ್ಷೆ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳು ಹೀಗಿವೆ:
► ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಗ್ಗೆ 8.30ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ.
► ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ ಹಾಜರುಪಡಿಸಿದರೆ ಮಾತ್ರ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಬಿಡಲಾಗುವುದು.
► ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಗಳನ್ನು ನಿಷೇಧಿಸಲಾಗಿರುವುದರಿಂದ ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸುವಂತಿಲ್ಲ ಮತ್ತು ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡುವುದಿಲ್ಲ.
► ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್ ರಹಿತ ವಸ್ತ್ರವನ್ನು ಧರಿಸುವಂತೆ ಹಾಗೂ ಯಾವುದೇ ತೆರನಾದ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಗಳನ್ನು ಧರಿಸದಂತೆ ತಿಳಿಸಲಾಗಿದೆ.
► ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹದನ್ನು ಧರಿಸಿ ಅಥವಾ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಸಹ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
► ಕುಡಿಯುವ ನೀರಿನ ಬಾಟಲ್ಗಳನ್ನು ಅನುಮತಿಸುವುದಿಲ್ಲ. ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಕಟಿಸಲಾಗುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
► ಮೊದಲನೆ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅನುಮತಿಸುವುದಿಲ್ಲ.
ಹಾಗೂ ಕಾಲ ಕಾಲಕ್ಕೆ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ತಪ್ಪದೆ ಪಾಲಿಸತಕ್ಕದ್ದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸುತ್ತೋಲೆಯಲ್ಲಿ ತಿಳಿಸಿದೆ