PSI ನೇಮಕಾತಿ ಹಗರಣ | ಮರು ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು
ಸ್ವತಂತ್ರ ಸಂಸ್ಥೆಗೆ ಪರೀಕ್ಷೆ ಜವಾಬ್ದಾರಿ
ಬೆಂಗಳೂರು, ನ. 10: ಪಿಎಸ್ಸೈನ 545 ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಆರೋಪ ಪ್ರಕರಣ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆ ರದ್ದು ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಸ್ವತಂತ್ರ ಸಂಸ್ಥೆಗೆ ಪರೀಕ್ಷೆ ನಡೆಸುವ ಜವಾಬ್ದಾರಿ ವಹಿಸಬೇಕೆಂದು ರಾಜ್ಯ ಸರಕಾರಕ್ಕೆ ಸೂಚಿಸಿ ಶುಕ್ರವಾರ ಆದೇಶಿಸಿದೆ.
ನೇಮಕಾತಿ ಸಂಬಂಧದ ಅಧಿಸೂಚನೆ ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಸರಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪರಹಿತ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಶಿವಶಂಕರೇ ಗೌಡ ಅವರಿದ್ದ ನ್ಯಾಯಪೀಠ ಶುಕ್ರವಾರ ಮಹತ್ವದ ಆದೇಶ ನೀಡಿದೆ.
ರಾಜ್ಯ ಸರಕಾರವು ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಬಹುದು. ಪಾರದರ್ಶಕವಾಗಿ ಪರೀಕ್ಷೆ ನಡೆಸುವುದನ್ನು ಸರಕಾರ ಖಾತರಿಪಡಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖ ಮಾಡಿದೆ.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಪ್ರಕರಣ ಬೆಳಕಿಗೆ ಬಂದ ಬಳಿಕ ಬ್ಲೂಟೂತ್ ಹಾಗೂ ಒಎಂಅರ್ ಮೂಲಕ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿತ್ತು. ಆದರೆ, ತನಿಖೆ ವೇಳೆ ಅಕ್ರಮ ನಡೆಸಲು ವಿವಿಧ ಆಯಾಮಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಹೀಗಾಗಿ, ಪ್ರಕರಣಲ್ಲಿ ಯಾರು ತಪ್ಪಿತಸ್ಥರು ಹಾಗೂ ಯಾರು ತಪ್ಪಿತಸ್ಥರಲ್ಲ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲದ ಕಾರಣ ಮರುಪರೀಕ್ಷೆ ನಡೆಸುವುದು ಸೂಕ್ತ ಎಂದು ಮನವಿ ಮಾಡಿದ್ದರು.
ಅರ್ಜಿದಾರರ ಪರ ವಕೀಲರು, ಪಿಎಸ್ಸೈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರರ ವಿರುದ್ಧ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿಲ್ಲ. ಆರೋಪಿಗಳ ವಿರುದ್ಧ ಯಾವೆಲ್ಲಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಅವುಗಳ ಸ್ಥಿತಿಗತಿ ಕುರಿತ ಮಾಹಿತಿ ಒಳಗೊಂಡ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಏನಿದು ಪ್ರಕರಣ?
ರಾಜ್ಯ ಸರಕಾರವು 2022ರ ಎಪ್ರಿಲ್ 29ರಂದು ಪಿಎಸ್ಸೈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿತ್ತು. ಪಿಎಸ್ಸೈ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ, ಕೋಲಾರದ ಚಂದನ್ ಎನ್ ವಿ ಸೇರಿದಂತೆ ನೂರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) 2022ರ ಜುಲೈ 19ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಾದಿತ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಏಳು ಅರ್ಜಿ ವಜಾ..!
ಕೋಲಾರದ ಚಂದನ್ ಎನ್.ವಿ ಸೇರಿದಂತೆ ನೂರಾರು ಅಭ್ಯರ್ಥಿಗಳು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ನ್ಯಾಯಾಲಯ ವಜಾ ಮಾಡಿದೆ.
ಬಿಜೆಪಿಗೆ ಛೀಮಾರಿಗೆ ಹಾಕಿದಂತೆ ಆಗಿದೆ:ಪ್ರಿಯಾಂಕ್ ಖರ್ಗೆ
ಹಿಂದೆ ನಡೆದಿರುವ 545 ಪಿಎಸ್ಸೈ ನೇಮಕಾತಿ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಲು ಆದೇಶಿಸಿ ಸ್ವತಂತ್ರ ಸಂಸ್ಥೆಯಿಂದ ಮತ್ತೆ ಮರುಪರೀಕ್ಷೆ ನಡೆಸಬೇಕು ಎಂದು ಆದೇಶಿಸಿರುವುದು ಹಿಂದಿನ ಬಿಜೆಪಿ ಸರಕಾರದ ದುಷ್ಟ ಆಡಳಿತಕ್ಕೆ ಉಚ್ಚ ನ್ಯಾಯಾಲಯದ ಸಾಕ್ಷಿ ಮುದ್ರೆಯಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲಾ ಎಂದು ಹಲವಾರು ಬಾರಿ ಸದನಕ್ಕೆ ವಾದಿಸಿದ್ದ ಹಿಂದಿನ ಬಿಜೆಪಿ ಸರಕಾರದ ಆಡಳಿತ ವೈಫಲ್ಯಕ್ಕೆ ಹಾಗೂ ಪ್ರಕರಣವನ್ನು ಹಳ್ಳ ಹಿಡಿಸಲು ತನಿಖೆ ಮೇಲೆ ಪ್ರಭಾವ ಬೀರಿದ ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದ ಅಂದಿನ ಬಿಜೆಪಿ ಸಚಿವರಿಗೆ ಛೀಮಾರಿಗೆ ಹಾಕಿದಂತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.