ಪಿಎಸ್ಐ ಹಗರಣ: ಆರ್.ಡಿ.ಪಾಟೀಲ್ ವಿರುದ್ಧದ 11 ಎಫ್ಐಆರ್ ವಿಲೀನ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ವಿವಿಧ ಆರೋಪಗಳಲ್ಲಿ ದಾಖಲಾಗಿರುವ 11 ಎಫ್ಐಆರ್ ಮತ್ತು ಆರೋಪ ಪಟ್ಟಿಯನ್ನು ವಿಲೀನಗೊಳಿಸುವಂತೆ ಕೋರಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತು.
ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ 11 ಎಫ್ಐಆರ್ ಹಾಗೂ ಆರೋಪ ಪಟ್ಟಿ ಒಟ್ಟಾಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ಪ್ರಕಟಿಸಿದೆ.
ಇದರೊಂದಿಗೆ ಆರ್.ಡಿ.ಪಾಟೀಲ್ ವಿರುದ್ಧದ ಎಫ್ಐಆರ್ ಗಳಿಗೆ ತಡೆಯಾಜ್ಞೆ ವಿಧಿಸಿ ಹೈಕೋರ್ಟ್ 2023ರ ಎ.17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ಐದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಎರಡು, ಚೌಕ್ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್ ಅರ್ಬನ್, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್ಐಆರ್ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್.ಡಿ ಪಾಟೀಲ್ ಅರ್ಜಿಯಲ್ಲಿ ಕೋರಿದ್ದರು.
ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಆರ್.ಡಿ.ಪಾಟೀಲ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಗಳಲ್ಲಿ ಅಪರಾಧ ಕೃತ್ಯಗಳು ಬೇರೆ ಬೇರೆ ಇವೆ. ಅಪರಾಧ ವರದಿಯಾಗಿರುವ ಸ್ಥಳವೂ ಬೇರೆ ಬೇರೆಯಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳೂ ಬೇರೆ ಬೇರೆಯಾಗಿದ್ದಾರೆ. ಆರ್.ಡಿ.ಪಾಟೀಲ್ ಎಲ್ಲ ಪ್ರಕರಣಗಳಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಂದೇ ಪ್ರಕರಣವನ್ನಾಗಿ ಮಾಡಲಾಗದು. ನಾಲ್ಕು ಜಿಲ್ಲೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ವಾದಿಸಿದ್ದರು.
ಅರ್ಜಿದಾರರ ಪರ ವಕೀಲ, ಆರ್.ಡಿ.ಪಾಟೀಲ್ ವಿರುದ್ಧ ಬೇರೆ ಬೇರೆ ಕಡೆ ದಾಖಲಾಗಿರುವ ಎಫ್ಐಆರ್ ಗಳು ಒಂದೇ ಪರೀಕ್ಷೆಗೆ ಸಂಬಂಧಿಸಿವೆ. ಇವೆಲ್ಲವೂ ಒಂದೇ ಅಪರಾಧವಾಗಿರುವುದರಿಂದ ಪ್ರತ್ಯೇಕ ಎಫ್ಐಆರ್ ಅಗತ್ಯವಿಲ್ಲ ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.