ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರದಿಂದ ತೈಲ ದರ ಏರಿಕೆ : ಆರ್.ಅಶೋಕ್
ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಆಗ್ರಹಿಸಿ ಜೂ.17 ರಂದು ಬಿಜೆಪಿಯಿಂದ ಪ್ರತಿಭಟನೆ
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ತೈಲ ದರವನ್ನು ಏರಿಕೆ ಮಾಡಿದೆ. ಈ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು.15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ" ಎಂದು ಹೇಳಿದರು.
ʼಗ್ಯಾರಂಟಿಗಾಗಿ 55,000 ಕೋಟಿ ರೂ.ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಯ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆʼ ಎಂದರು.
ಕಳ್ಳ ದಾರಿ ಮೂಲಕ ಸೇಡು :
ನ್ಯಾಯವಾಗಿ ಮಾಡುವುದಿದ್ದರೆ ಬಜೆಟ್‌ನಲ್ಲಿ ಸರ್ಕಾರ ತೈಲ ದರ ಏರಿಸಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದರಿಂದ ನಂತರ ಕಳ್ಳ ದಾರಿಯಿಂದ ದರ ಏರಿಸಿ ಜನರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಸಂಸತ್ತಿನಲ್ಲಿ 100 ಸೀಟು ಪಡೆಯಲಾಗದ ಕಾಂಗ್ರೆಸ್ ಪೆಟ್ರೋಲ್ ದರವನ್ನು 100 ರೂಪಾಯಿಗೆ ಹೆಚ್ಚು ಮಾಡಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಎಂದು ತೈಲ ದರ ಏರಿಸಿದ್ದಾರೆ ಎಂದು ದೂರಿದರು.
ಆಸ್ತಿ ಮಾರಾಟ :
ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ ಬಿಡಿಎ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಆಸ್ತಿಗಳನ್ನು ಕೂಡ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಶಿಸ್ತನ್ನು ಸರ್ವನಾಶ ಮಾಡಿದ್ದಾರೆ. ಇನ್ನೂ ಒಂದು ವರ್ಷದಲ್ಲಿ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ ಎಂದರು.
ಪ್ರತಿಭಟನೆ :
ತೈಲ ದರ ಏರಿಕೆ ಇಳಿಕೆಗೆ ಒತ್ತಾಯಿಸಿ ಜೂನ್ 17 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ. ಜೊತೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಇನ್ನು ಮುಂದೆಯೂ ಪ್ರತಿಭಟನೆ ನಡೆಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.