ಮುಡಾ ಪ್ರಕರಣ | ಜಿಲ್ಲಾಧಿಕಾರಿಗಳ ವರ್ಗಾವಣೆಯು ಕಡತಗಳನ್ನು ತಿರುಚುವ ಪ್ರಯತ್ನವೇ? : ಆರ್.ಅಶೋಕ್
"ಸಿದ್ದರಾಮಯ್ಯನವರೇ, ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ ಸಿಬಿಐ ತನಿಖೆಗೆ ನೀಡಲು ಯಾಕೆ ಭಯ?"
ಬೆಂಗಳೂರು : 4,000 ಕೋಟಿ ರೂ. ಮೌಲ್ಯದ ಬೃಹತ್ ಮುಡಾ ಹಗರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಧಿಡೀರನೆ ಮೈಸೂರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಮುಖ್ಯಮಂತ್ರಿಗಳ ಮೇಲೆ ಇನ್ನಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವಿಪಕ್ಷನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, "ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪದೇ ಪದೇ ಪತ್ರ ಬರೆದು ಮುಡಾ ಹಗರಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಈಗ ಜಿಲ್ಲಾಧಿಕಾರಿಗಳನ್ನೇ ಎತ್ತಂಗಡಿ ಮಾಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಿಎಂ ಸಿದ್ದರಾಮಯ್ಯ ನವರೇ, ಹೀಗೆ ದಿಢೀರನೆ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶವೇನು?. ಅದರ ಅವಶ್ಯಕತೆ ಏನಿತ್ತು?. ಹಗರಣದ ಸಂಪೂರ್ಣ ಮಾಹಿತಿ ಇರುವ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿ ಕಡತಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿದ್ದರೆ ಸಿಬಿಐ ತನಿಖೆಗೆ ನೀಡಲು ಯಾಕೆ ಭಯ?. ಇದು ನಿಮಗೆ ಅಗ್ನಿಪರೀಕ್ಷೆ. ನೀವು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಿ ಈ ಅಗ್ನಿಪರೀಕ್ಷೆಯಿಂದ ಹೊರಬನ್ನಿ ಎಂದು ಸವಾಲು ಹಾಕಿದ್ದಾರೆ.