ಉದ್ಯೋಗ ಮೀಸಲಾತಿ | ಕನ್ನಡಿಗರ ಮೂಗಿಗೆ ತುಪ್ಪ ಸವರಿದರೆ ಮಾನ ವಾಪಸ್ ಬರುತ್ತದೆಯೇ?: ಆರ್.ಅಶೋಕ್
ಬೆಂಗಳೂರು: ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಕನ್ನಡದ ಗಾದೆ ಮಾತು ಕೇಳಿರಬೇಕಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಇದು ನಿಮಗೆ ಬಹಳ ಸೂಕ್ತವಾಗಿ ಅನ್ವಯಿಸುತ್ತದೆ. ದಲಿತರ ದುಡ್ಡು ಹೊಡೆದು ಕಳೆದುಕೊಂಡಿರುವ ಮಾನ ಕನ್ನಡಿಗರ ಮೂಗಿಗೆ ತುಪ್ಪ ಸವರಿದರೆ ವಾಪಸ್ಸು ಬರುತ್ತದೆಯೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕುರಿತ ಸಿಎಂ ಪೋಸ್ಟ್ಗೆ ಪ್ರತಿಕ್ರಿಯಿಸಿದ ಅವರು,"ದಲಿತರ ದುಡ್ಡು ಹೊಡೆದಿರುವ ಬಗ್ಗೆ ಉತ್ತರ ಕೋಡಿ ಸ್ವಾಮಿ ಅಂದರೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಹೊಸ ನಾಟಕ ಶುರು ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕದ ಜನತೆ ನಿಮ್ಮ ಕುತಂತ್ರಗಳನ್ನ ಅರಿಯದಷ್ಟು ದಡ್ಡರು, ಅಮಾಯಕರು ಎಂದು ತಿಳಿದಿದ್ದೀರಾ? ಎಂದು ಎಕ್ಸ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ಅಥವಾ ನಿಮ್ಮ ಸರಕಾರ, ಪಕ್ಷ ಮುಜುಗರಕ್ಕೊಳಗಾದಾಗಲೆಲ್ಲ ಪ್ರತ್ಯೇಕ ಧರ್ಮ, ಪ್ರತ್ಯೇಕ ಧ್ವಜ, ನಂದಿನಿ-ಅಮುಲ್, ‘ನನ್ನ ತೆರಿಗೆ ನನ್ನ ಹಕ್ಕು' ಎಂಬ ಇಲ್ಲಸಲ್ಲದ ವಿಚಾರಗಳನ್ನ ಹುಟ್ಟುಹಾಕಿ ಜನರ ಗಮನ ಬೇರೆಡೆ ಸೆಳೆಯುವ ನಿಮ್ಮ ಗೋಸುಂಬೆ ರಾಜಕೀಯ ಕನ್ನಡಿಗರಿಗೆ ಗೊತ್ತಿಲ್ಲ ಎಂಬ ಭ್ರಮೆಯಲ್ಲಿದ್ದೀರಾ? ಎಂದು ಅಶೋಕ್ ಕಿಡಿಗಾರಿದ್ದಾರೆ.
ನಿಮ್ಮ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ, ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಸಿದ್ದರಾಮಯ್ಯನವರೇ, ನಿಮ್ಮ ಮುಖವಾಡ ಕಳಚಿದೆ, ಆಟ ಮುಗಿದಿದೆ. ಈ ನಾಟಕವೆಲ್ಲಾ ಬಿಟ್ಟು ತೆಪ್ಪಗೆ ರಾಜೀನಾಮೆ ಕೊಟ್ಟು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ, ರಾಜ್ಯದ ಗೌರವವನ್ನೂ ಉಳಿಸಿ ಎಂದು ಅವರು ಆಗ್ರಹಿಸಿದ್ದಾರೆ.
"ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು" ಎಂಬ ಕನ್ನಡದ ಗಾದೆ ಮಾತು ಕೇಳಿರಬೇಕಲ್ಲವೇ ಸಿಎಂ @siddaramaiah ನವರೇ? ಇದು ನಿಮಗೆ ಬಹಳ ಸೂಕ್ತವಾಗಿ ಅನ್ವಯಿಸುತ್ತದೆ. ದಲಿತರ ದೊಡ್ಡು ಹೊಡೆದು ಕಳೆದುಕೊಂಡಿರುವ ಮಾನ ಕನ್ನಡಿಗರ ಮೂಗಿಗೆ ತುಪ್ಪ ಸವರಿದರೆ ವಾಪಸ್ಸು ಬರುತ್ತದೆಯೇ?ದಲಿತರ ದುಡ್ಡು ಹೊಡೆದಿರುವ ಬಗ್ಗೆ ಉತ್ತರ ಕೋಡಿ ಸ್ವಾಮಿ ಅಂದರೆ… https://t.co/iuwkrVXcOt
— R. Ashoka (@RAshokaBJP) July 17, 2024