ʼ18 ಶಾಸಕರ ಅಮಾನತುʼ ಆದೇಶ ಹಿಂಪಡೆಯಲು ಸ್ಪೀಕರ್ ಖಾದರ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮನವಿ
ಆರ್.ಅಶೋಕ್
ಬೆಂಗಳೂರು : ‘ಹದಿನೆಂಟು ಮಂದಿ ಶಾಸಕರನ್ನು ಅಮಾನತು ಮಾಡಿರುವ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ, ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ.
ಮಂಗಳವಾರ ಸ್ಪೀಕರ್ ಖಾದರ್ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಆರ್.ಅಶೋಕ್, ‘ನಮ್ಮ ಪ್ರತಿಭಟನೆ ನಿಮ್ಮ ವಿರುದ್ಧ ಇರಲಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಮತ್ತೊಮ್ಮೆ ಗಮನಕ್ಕೆ ತರಲು ಬಯಸುತ್ತೇನೆ. ಈ ಪತ್ರದ ಆರಂಭದಲ್ಲಿ ತಿಳಿಸಿದಂತೆ ಸದನ ದೊಡ್ಡದು. ಸ್ಪೀಕರ್ ದೊಡ್ಡವರು ಎಂಬ ಪ್ರಜಾಪ್ರಭುತ್ವದ ಮೂಲಭೂತ ಆಶಯ. ಹೀಗಾಗಿ ನಾವೆಲ್ಲರೂ ಸೇರಿಕೊಂಡು ಈ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಉಳಿಸಬೇಕಾಗಿದೆ. ಆದುದರಿಂದ ಶಾಸಕರ ಅಮಾನತು ಆದೇಶವನ್ನು ಮತ್ತೊಮ್ಮೆ ಮರು ಪರಿಶೀಲಿಸಬೇಕು’ ಎಂದು ಕೋರಿದ್ದಾರೆ.
‘ಮಾ.21ರಂದು ಅಧಿವೇಶನದ ವೇಳೆ ಸದನದಲ್ಲಿ ‘ಹನಿಟ್ರ್ಯಾಪ್’ ಹಾಗೂ ‘ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ’ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ಪ್ರತಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಸುತ್ತ ನಿಂತು ಪ್ರತಿಭಟನೆ ಮಾಡಿದ್ದೇವೆ. ವಿಧಾನ ಮಂಡಲ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ‘ಪ್ರಜಾಪ್ರಭುತ್ವದ ದೇಗುಲಗಳು' ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಸ್ಪೀಕರ್ ಮತ್ತು ಸಭಾಪತಿಗೆ ಇರುವ ಸ್ಥಾನವೂ ಅಷ್ಟೇ ಗೌರವಾನ್ವಿತವಾದುದು.
ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಮಾ.21ರಂದು ನಡೆದ ಘಟನೆ ಉದ್ದೇಶಪೂರ್ವಕವಾದುದಲ್ಲ. ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ, ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ, ಯಾರಿಗೇ ಆಗಲೀ ಇದು ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಒಂದು ವೇಳೆ ತಾವು ಅಂದು ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಮಾಡಿದ್ದರೆ ನಾವು ಖಂಡಿತ ಈ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ಒಂದಿಷ್ಟು ಕಠೋರ ಎನ್ನುವಂತಹ ನಿರ್ಧಾರ ತಮ್ಮಿಂದ ಪ್ರಕಟವಾಗಿದೆ. ಇದರಿಂದಾಗಿ ಒಟ್ಟು 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದಂತೆ ಆಗಿದೆ. ಈ ನಿರ್ಬಂಧಗಳನ್ನು ಸಡಿಲಿಸಿ, ಎಂದಿನಂತೆ ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕೊಡಬೇಕೆಂದು ಅಶೋಕ್ ಮನವಿ ಮಾಡಿದ್ದಾರೆ.