ಜಾತಿ ಗಣತಿ | ಸಿದ್ದರಾಮಯ್ಯರ ಗ್ಯಾಂಗ್ ಎಲ್ಲೋ ಕುಳಿತು ರೂಪಿಸಿದ ವರದಿ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾಂಗ್ ಎಲ್ಲೋ ಕುಳಿತು ಸಿದ್ಧಪಡಿಸಿದ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ (ಜಾತಿ ಗಣತಿ)ಯನ್ನು ಯಾರೂ ಒಪ್ಪಬೇಕಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯಲ್ಲಿ ಸಹಿ ಹಾಕದೆ ಕಾಂತರಾಜು ಓಡಿಹೋಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ತೆಗೆದು ನೋಡಿದಾಗ ಅದು ಅಸಲಿಯಲ್ಲ, ಕೇವಲ ಒಂದು ಪ್ರತಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಗ್ಡೆ ಪತ್ರ ಬರೆದಿದ್ದಾರೆ. ಹತ್ತು ವರ್ಷದಲ್ಲಿ ಒಂದು ಕೋಟಿ ಮಕ್ಕಳು ಹುಟ್ಟಿದ್ದಾರೆ ಎಂದುಕೊಂಡರೆ, ಇವರನ್ನು ಯಾವ ವರ್ಗಕ್ಕೆ ಸೇರಿಸುತ್ತಾರೆ? ಹೊಸ ಪೀಳಿಗೆಯ ಭವಿಷ್ಯವೇನು? ಮೀಸಲಾತಿಯ ಮಾನದಂಡವೇನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ವ್ಯರ್ಥವಾಗಿದೆ. ಸಚಿವರು ಅಭಿಪ್ರಾಯ ನೀಡುವಂತೆ ಸೂಚಿಸಲಾಗಿದೆ. ಸಂಪುಟದ ಸಚಿವರನ್ನೇ ಜಾತಿಯ ಬಲೆಯಲ್ಲಿ ಸಿಕ್ಕಿ ಹಾಕಿಸಿ ಅಪಮಾನ ಮಾಡಲಾಗುತ್ತಿದೆ. ನವೆಂಬರ್ನಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗಿದ್ದು, ಆ ಸಮಯದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದ್ದಾಗ ಸಿಎಂ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದರು. ಆಗಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬಹುದಿತ್ತು ಎಂದು ಹೇಳಿದರು.
ಸಿದ್ದಗಂಗಾ ಮಠಕ್ಕೆ ಸಮೀಕ್ಷೆ ಮಾಡುವವರು ಹೋಗಿಲ್ಲ. ದಾವಣಗೆರೆಯ ಶಾಸಕರು ಅದನ್ನೇ ಹೇಳಿದ್ದಾರೆ. ಜಾತಿ ಗಣತಿ ಮಾಡಿರುವ ವಿಧಾನವೇ ಅವೈಜ್ಞಾನಿಕವಾಗಿದೆ. ಸಮೀಕ್ಷೆಯಲ್ಲಿ ಶಾಲಾ ಮಕ್ಕಳನ್ನು ಬಳಸಲಾಗಿದೆ. ಒಂದೇ ಕಡೆ ಕುಳಿತು ದತ್ತಾಂಶ ಬರೆಯಲಾಗಿದೆ. ಇದಕ್ಕಾಗಿ ಖರ್ಚು ಮಾಡಿದ 165 ಕೋಟಿ ರೂ.ಯಾರ ಜೇಬಿಗೆ ಹೋಗಿದೆ? ಮುಸ್ಲಿಮರು ಬಹುಸಂಖ್ಯಾತರೆಂದು ವರದಿಯಲ್ಲಿ ತಿಳಿದುಬಂದಿರುವುದರಿಂದ ಅವರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಕೂಡಲೇ ತೆಗೆದುಹಾಕಬೇಕು ಎಂದು ಅಶೋಕ್ ಒತ್ತಾಯಿಸಿದರು.
ಎಲ್ಲ ಸಮುದಾಯದವರು ಜಾತಿ ಗಣತಿ ವರದಿ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ. ಎಲ್ಲರಿಗೂ ಇದರಲ್ಲಿ ನಂಬಿಕೆ ಹೋಗಿದೆ. ಕಾಂಗ್ರೆಸ್ನ ಶಾಸಕರು ಯಾವುದಾದರೂ ಒಂದು ಕಡೆ ನಿಲ್ಲಬೇಕು. ಕೆಲವು ಶಾಸಕರು ಈ ವರದಿ ಒಪ್ಪಿಲ್ಲ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ, ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಹಿಡಿದುಕೊಂಡಿದ್ದಾರೆ ಎಂದು ಅವರು ನುಡಿದರು.
ನಾಳೆ ಬಾ ಸ್ಥಿತಿ: ಜಾತಿ ಗಣತಿ ವರದಿ ಬಗ್ಗೆ ‘ನಾಳೆ ಬಾ’ ಎಂಬ ಸ್ಥಿತಿ ಇದೆ. ಯಾವುದನ್ನೂ ನಿರ್ಧಾರ ಮಾಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಸೀಟು ಉಳಿದರೆ ಸಾಕು ಎಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜಾತಿಗಳನ್ನು ಒಡೆದುಹಾಕಿದ್ದಾರೆ. ಸಂಪುಟದಲ್ಲಿ ಕೈ ಮಿಲಾಯಿಸುವ ಮಟ್ಟಿಗೆ ಜಗಳವಾಗಿದೆ ಎಂದು ಅವರು ತಿಳಿಸಿದರು.
‘ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅವಕಾಶ ನೀಡದೆ ಸರಕಾರ, ವಿದ್ಯಾರ್ಥಿಗಳಿಗೆ ಅಪಮಾನ ಮಾಡಿದೆ. ಹಿಂದೂಗಳ ಬಗ್ಗೆ ಎಷ್ಟು ಕೋಪವಿದೆ ಎಂಬುದು ಗೊತ್ತಾಗುತ್ತದೆ. ಬ್ರಾಹ್ಮಣರು ಮಾತ್ರವಲ್ಲದೆ, ಮರಾಠರು, ವೈಶ್ಯ ಸಮಯದಾಯದವರು ಜನಿವಾರ ಹಾಕುತ್ತಾರೆ. ಈ ಎಲ್ಲ ಸಮುದಾಯಗಳಿಗೆ ಅಪಮಾನ ಮಾಡಲಾಗಿದೆ. ಮುಸ್ಲಿಮ್ ಹುಡುಗಿಯರು ಹಿಜಾಬ್ ಹಾಕಲು ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿ, ಅಧಿಕಾರಿಗಳನ್ನು ಅಮಾನತು ಮಾಡಬೇಕು’
-ಆರ್.ಅಶೋಕ್ ವಿಪಕ್ಷ ನಾಯಕ