‘ನಾಗಮಂಗಲ ಗಲಾಟೆ’ ತನಿಖೆ ಎನ್ಐಎಗೆ ವಹಿಸಲು ಆರ್.ಅಶೋಕ್ ಆಗ್ರಹ
ಬೆಂಗಳೂರು: ‘ಮಂಡ್ಯ ಜಿಲ್ಲೆ ನಾಗಮಂಗಲ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಸಂದೇಹವಿರುವುದರಿಂದ ಸ್ಥಳೀಯ ಪೊಲೀಸರು ಈ ಪ್ರಕರಣವನ್ನ ಬೇಧಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಪಿಎಫ್ಐ, ಕೆಎಫ್ಡಿಯಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ್ ಖರೀದಿಸಿದ್ದಾರೆ, ಸಿಸಿಟಿವಿಗಳನ್ನ ನಾಶ ಮಾಡಿದ್ದಾರೆ ಮತ್ತು ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ ಮತ್ತು ಪೂರ್ವನಿಯೋಜಿವಾಗಿದೆ ಎಂಬುದು ಸ್ಥಳೀಯರ ಅನುಮಾನವಾಗಿದೆ ಎಂದು ಗಮನ ಸೆಳೆದಿದ್ದಾರೆ.
‘ಅಷ್ಟೇ ಅಲ್ಲದೆ ಸರಕಾರ ದಾಖಲಿಸಿರುವ ಎಫ್ಐಆರ್ ನಲ್ಲಿ ಮೊದಲ 23 ಆರೋಪಿಗಳು ಹಿಂದೂಗಳೇ ಆಗಿರುವುದರಿಂದ ಪೊಲೀಸರು ನಿಷೇಧಿತ ಸಂಘಟನೆಗಳ ಒತ್ತಡದಲ್ಲಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘ರಾಜ್ಯದ ಕಾಂಗ್ರೆಸ್ ಸರಕಾರದ ಅತಿಯಾದ ಓಲೈಕೆ ರಾಜಕಾರಣದಿಂದ, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಪದೇ ಪದೇ ಹರಾಜು. ರಸ್ತೆ ಗುಂಡಿಗಳಿಂದ, ಕಸದ ರಾಶಿಯಿಂದ, ದಲಿತ ಸಮುದಾಯಕ್ಕೆ ಮಾಡಿದ ಮೋಸದಿಂದ, ಸರಕಾರದ ಅತಿಯಾದ ಭ್ರಷ್ಟಾಚಾರದಿಂದ ಕರ್ನಾಟಕದ ಮಾನವನ್ನು ಕಾಂಗ್ರೆಸ್ ಈಗಾಗಲೇ ಹರಾಜು ಮಾಡಿತ್ತು.
ಇದೀಗ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಗಣೇಶನನ್ನು ಬಂಧಿಸಿ, ಮತ್ತೊಮ್ಮೆ ಕರ್ನಾಟಕದ ಮಾನವನ್ನು ಹರಾಜು ಹಾಕಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತ ಕನ್ನಡಿಗರಿಗೆ ಶಾಪ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಅಶೋಕ್ ಟೀಕಿಸಿದ್ದಾರೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ PFI, KFD ಅಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ ಖರೀದಿಸಿದ್ದಾರೆ, ಸಿಸಿಟಿವಿಗಳನ್ನ ನಾಶ ಮಾಡಿದ್ದಾರೆ, ಮತ್ತು ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ… pic.twitter.com/Kf0g7BBarf
— R. Ashoka (@RAshokaBJP) September 15, 2024