ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು; ಆರ್. ಅಶೋಕ್ ಪ್ರತಿಕ್ರಿಯಿಸಿದ್ದು ಹೀಗೆ…
ಆರ್. ಅಶೋಕ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಪಕ್ಷದ ವರಿಷ್ಟರು ಯಾರನ್ನೇ ಆಯ್ಕೆ ಮಾಡಿದರೂ ಸ್ವಾಗತಿಸುತ್ತೇವೆ. ನಮಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದಷ್ಟೇ ಮುಖ್ಯ’ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಅನೇಕರ ಹೆಸರು ಕೇಳಿಬರುತ್ತಿದೆ. ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿರುವುದನ್ನು ನಾನೂ ಮಾಧ್ಯಮದಲ್ಲಿ ನೋಡಿದೆ. ಕರಂದ್ಲಾಜೆ ಕೂಡ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ಹೈಕಮಾಂಡ್ ನಾಯಕರು ಆದಷ್ಟು ಬೇಗ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ನಾವೂ ಒತ್ತಡ ಹಾಕಲ್ಲ. ಪಂಚ ರಾಜ್ಯ ಚುನಾವಣೆ ಗೆಲ್ಲುವುದಕ್ಕೆ ಮೊದಲ ಆದ್ಯತೆ. ಕೇಂದ್ರದ ನಾಯಕರು ಯಾರನ್ನಾದ್ರೂ ಅಧ್ಯಕ್ಷ, ವಿಪಕ್ಷ ನಾಯಕರನ್ನ ಮಾಡಲಿ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿಯಾಗಿದ್ದು. 28 ಲೋಕಸಭೆ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಆ ಮೂಲಕ ಮೋದಿ ಅವರಿಗೆ ಮತ್ತಷ್ಟು ಶಕ್ತಿ ಬರಲಿದೆ. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡ್ತಿದ್ದೇವೆ. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮಗುರಿ. ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ಇಲ್ಲ ಎಂದು ಅವರು ವಿವರಣೆ ನೀಡಿದರು.