"ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟನ್ನೂ ಕೊಡಲಿಲ್ಲ": ಪರೋಕ್ಷವಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಸಿಂಹ
► "ಹಿಂದುತ್ವವಾದಿಗಳಿಗೆ ಗೇಲಿಗೆ ಒಳಗಾಗುವ ಪರಿಸ್ಥಿತಿ ಬಂದಿದ್ದು ದುರದೃಷ್ಟಕರ" ಎಂದು ಟ್ವೀಟ್ ಮಾಡಿ ಬಳಿಕ ಅಳಿಸಿ ಹಾಕಿದ ಸಂಸದ ►ರಘುಪತಿ ಭಟ್ ಪ್ರತಿಕ್ರಿಯೆ ಏನು?
ಪ್ರತಾಪ್ ಸಿಂಹ / ರಘುಪತಿ ಭಟ್
ಮೈಸೂರು: ಪಕ್ಷದಿಂದ ಉಚ್ಛಾಟನೆಗೊಂಡ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಹಿಜಾಬ್ ವಿವಾದ ಸಂತ್ರಸ್ತೆ ಕುಟುಕಿರುವ ಬಗ್ಗೆ ಪ್ರತಾಪ್ ಸಿಂಹ ಅವರು ಬಿಜೆಪಿಯ ವಿರುದ್ಧ ಪರೋಕ್ಷ ಚಾಟಿ ಬೀಸಿದ್ದಾರೆ.
ರಘುಪತಿ ಭಟ್ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಜಾಬ್ ವಿವಾದ ಸಂತ್ರಸ್ತೆ ಅಲಿಯಾ ಅಸಾದಿ ಅವರು ಇತ್ತೀಚೆಗೆ ಮಾಡಿದ್ದ ಟ್ವೀಟ್ ಒಂದು ವೈರಲ್ ಆಗಿತ್ತು. ರಘುಪತಿ ಭಟ್ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಬಗ್ಗೆ ಅಲಿಯಾ ಅವರು ಕುಟುಕಿದ್ದರು. ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಭಟ್ ರ ವಿರುದ್ಧ ವ್ಯಾಪಕ ಟ್ರೋಲ್ ಗಳಿಗೂ ಕಾರಣವಾಗಿತ್ತು.
ಇದರ ಬೆನ್ನಲ್ಲೇ, ರಘುಪತಿ ಭಟ್ ಅವರು ಹಿಜಾಬ್ ಬಗ್ಗೆ ತನಗೆ ವಿರೋಧವಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಅಲಿಯಾ ಅಸ್ಸಾದಿಗೆ ರಘುಪತಿ ಭಟ್ ಅವರು ಶುಭಾಶಯ ಕೋರಿರುವುದಾಗಿಯೂ ವರದಿಯಾಗಿತ್ತು.
ಈ ವರದಿಯ ತುಣುಕನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ರತಾಪ ಸಿಂಹ "ಉಡುಪಿ ಶಾಲೆಯೊಂದರಲ್ಲಿ ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಚಾಟನೆಗೆ ಒಳಗಾಗಿ ಬುರ್ಖಾ ಸ್ಪೂಡೆಂಟ್ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ" ಎಂದು ಬರೆದಿದ್ದರು. ಇದಾಗಿ ಕೆಲವೇ ಹೊತ್ತಿನಲ್ಲಿ ಪ್ರತಾಪ ಸಿಂಹ ಅವರು ಆ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರತಾಪ ಸಿಂಹ ಅವರ ಬದಲಿಗೆ ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿತ್ತು.
ಪ್ರತಾಪ್ ಸಿಂಹ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ರಘುಪತಿ ಭಟ್, "ಪ್ರತಾಪ್ ಸಿಂಹ ಅವರಿಗೆ ವಂದನೆಗಳು. ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರ ಧ್ವನಿಯಾಗಿ ಇರುತ್ತೇನೆ." ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ್ ಸಿಂಹ ಅವರಿಗೆ ವಂದನೆಗಳು.
— K Raghupathi Bhat (Modi Ka Parivar) (@RaghupathiBhat) June 3, 2024
ನಿಜವಾದ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಮತ್ತು ಹಿಂದುತ್ವವಾದಿಗಳಿಗೆ ನನ್ನ ನಿಲುವು ಏನೆಂದು ಸ್ಪಷ್ಟವಾಗಿ ತಿಳಿದೆ. ಪರಿವಾರದ ಮನಸ್ಥಿತಿಯ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನನ್ನ ಜೊತೆ ಇದ್ದಾರೆ. ನನ್ನ ಉಸಿರು ಇರುವವರೆಗೆ ಅವರ ಧ್ವನಿಯಾಗಿ ಇರುತ್ತೇನೆ. https://t.co/Oor67jpT7m