ಅಧಿವೇಶನ | ಅನಧಿಕೃತ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಇ-ಖಾತಾ ನೀಡಲು ಕ್ರಮ : ರಹೀಂ ಖಾನ್

ಬೆಂಗಳೂರು : ಪ್ರಸ್ತುತ ಅನಧಿಕೃತ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಇ-ಖಾತಾ ನೀಡಲು ಕ್ರಮ ವಹಿಸಲಾಗಿದೆ ಎಂದು ಪೌರಾಡಳಿತ ಸಚಿವ ರಹೀಂಖಾನ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುನಿಸಿಪಲ್ ಕಾಯ್ದೆಗಳ ತಿದ್ದುಪಡಿಯಂತೆ ಕರ್ನಾಟಕ ಪೌರಸಭೆಗಳ(ತೆರಿಗೆ) ನಿಯಮಗಳು-1995 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ-1976 ಶೆಡ್ಯೂಲ್ 3ರ ತೆರಿಗೆ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರಂತೆ ಅನಧಿಕೃತ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಇ-ಖಾತಾ ವಿತರಿಸಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದರು.
ಇ-ಆಸ್ತಿ ತಂತ್ರಾಂಶದಲ್ಲಿ ಖಾತಾ ಸೃಜನೆ ಮಾಡಲು ಅನುಸರಿಸಬೇಕಾದ ಕ್ರಮಗಳು ಮತ್ತು ತೆಗೆದುಕೊಳ್ಳಬೇಕಾದ ದಾಖಲೆಗಳ ಕುರಿತು ವ್ಯವಸ್ಥಿತ ಕಾರ್ಯಾಚರಣೆ ವಿಧಾನವನ್ನು ಪೌರಾಡಳಿತ ನಿರ್ದೇಶನಾಲಯದಿಂದ 2025ನೇ ಫೆಬ್ರವರಿ 17ರಂದು ಹೊರಡಿಸಲಾಗಿದೆ ಹಾಗೂ 2025ನೇ ಫೆಬ್ರವರಿ 11ರಿಂದ ಅನಧಿಕೃತ ಸ್ವತ್ತುಗಳಿಗೆ ಖಾತ ನೀಡಲು ಇ-ಆಸ್ತಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ರಹೀಂಖಾನ್ ಹೇಳಿದರು.