‘ಜಾತಿ ಗಣತಿ’ ಮರೆಸಲು ‘ರೋಹಿತ್ ವೇಮುಲಾ ಕಾಯ್ದೆ ಜಾರಿ’ ಮುನ್ನಲೆಗೆ: ಪ್ರಹ್ಲಾದ್ ಜೋಶಿ ಟೀಕೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ (ಜಾತಿ ಗಣತಿ) ವಿವಾದ, ತಮ್ಮ ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ‘ರೋಹಿತ್ ವೇಮುಲಾ ಕಾಯ್ದೆ ಜಾರಿ’ ಮುನ್ನಲೆಗೆ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ. ಜಾತಿ ಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ? ರಾಜ್ಯದಲ್ಲಿ ಒಬ್ಬರೇ ಒಬ್ಬರ ಮನೆಗೂ ತೆರಳಿಲ್ಲ. ವಿವಾದ, ವಿರೋಧ ವ್ಯಕ್ತವಾಗುತ್ತಲೇ ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ ಎಂದರು. ಇದೆಂತಹ ಹುಡುಗಾಟ’ ಎಂದು ಪ್ರಶ್ನಿಸಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ದೇಶದ ಬಗ್ಗೆ ನೈಜ ಕಾಳಜಿಯಿಲ್ಲ. ರಾಷ್ಟ್ರದ ಸಮಗ್ರತೆ, ನಾಗರಿಕರ ಕ್ಷೇಮ ಯಾವುದರ ಬಗ್ಗೆಯೂ ಒಂದು ಪ್ರಾಮಾಣಿಕ ಮತ್ತು ಪಾರದರ್ಶಕ ನಿಲುವುಗಳಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ ಎಂದು ಜೋಶಿ ಆರೋಪಿಸಿದರು.
ರಾಹುಲ್ ಗಾಂಧಿ ದೇಶದ ಒಳಿತಿಗೆ ರಾಜಕೀಯ ಮಾಡುತ್ತಿಲ್ಲ. ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದಲ್ಲಿ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿಗೆ ತರಬೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ' ಎಂದು ಜೋಶಿ ಟೀಕಿಸಿದರು.
ಖಂಡನೆ: ‘ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ ನಡೆಸಿದಂತಾಗಿದೆ. ಇದೊಂದು ಧಾರ್ಮಿಕ ನಂಬಿಕೆಯಾಗಿದ್ದು, ಇದನ್ನ ಗಂಭೀರವಾಗಿ ಪರಿಗಣಿಸಿ ಸರಕಾರ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು’ ಎಂದು ಕೇಂದ್ರ ಸಚಿವ ಜೋಶಿ ಆಗ್ರಹಿಸಿದರು.