ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾಗಲಿ: ದಿನೇಶ್ ಗುಂಡೂರಾವ್
ಬೆಂಗಳೂರು: ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದು ಮಾಡಲು ಲೋಕಸಭಾ ಸ್ಪೀಕರ್ ಅವರು ತೋರಿದ ಅದೇ ಆತುರ ಸದಸ್ಯತ್ವ ಮರುಸ್ಥಾಪನೆಗೂ ತೋರಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಅವರ ಲೋಕಸಭಾ ಸದಸ್ಯತ್ವ ರದ್ದು ಮಾಡಲಾಯಿತು. ಲೋಕಸಭಾ ಸ್ಪೀಕರ್ ಆತುರಾತುರವಾಗಿ ರಾಹುಲ್ ಗಾಂಧಿಯವರ ಸದಸ್ಯತ್ವ ರದ್ದು ಮಾಡಿದ್ದರು. ಈಗ ಸುಪ್ರೀಂ ಕೋರ್ಟ್ ಶಿಕ್ಷೆ ಜಾರಿಗೆ ಮಧ್ಯಂತರ ತಡೆ ನೀಡಿದೆ. ಈಗ ಸದಸ್ಯತ್ವ ಮರುಸ್ಥಾಪನೆಗೂ ಸ್ಪೀಕರ್ ಅದೇ ಆತುರ ತೋರಿಸಲಿ ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿದ ಸುಪ್ರೀಂ, ಒಬ್ಬ ಸಂಸದ ಅನರ್ಹಗೊಂಡರೆ ಅದು ಕೇವಲ ಆ ವ್ಯಕ್ತಿಯ ನಷ್ಟವಲ್ಲ, ಸಂಸದನನ್ನು ಆಯ್ಕೆ ಮಾಡಿದ ಇಡೀ ಕ್ಷೇತ್ರದ ಜನತೆಗೂ ಅಗುವ ನಷ್ಟ. ಹಾಗಾಗಿ ಜನರ ಆಯ್ಕೆಯ ಹಕ್ಕಿನ ರಕ್ಷಣೆಯಾಗಬೇಕೆಂದು ಅಭಿಪ್ರಾಯ ಪಟ್ಟಿದೆ. ಸ್ಪೀಕರ್ರವರು ಕೂಡಲೇ ರಾಹುಲ್ ಗಾಂಧಿಯವರ ಸದಸ್ಯತ್ವ ಮರುಸ್ಥಾಪಿಸಲಿ ಎಂದು ಒತ್ತಾಯಿಸಿದ್ದಾರೆ.