ರಾಯಚೂರು: ಸರಣಿ ಅಪಘಾತದಲ್ಲಿ ಕಾರು ಗುದ್ದಿದ ರಭಸಕ್ಕೆ 15 ಅಡಿ ಎತ್ತರಕ್ಕೆ ಹಾರಿ ಬಿದ್ದ ವಿದ್ಯಾರ್ಥಿನಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
'ಚಾಲಕರ ಲೈಸೆನ್ಸ್ ಅಮಾನತಿಗೆ ಶಿಫಾರಸು'
ರಾಯಚೂರು: ವೇಗವಾಗಿ ಬಂದ ಕಾರೊಂದು ಇಬ್ಬರು ವಿದ್ಯಾರ್ಥಿಗಳು ಹಾಗೂ ದ್ವಿಚಕ್ರವಾಹನ ಸವಾರ ಸೇರಿ ಮೂವರಿಗೆ ಢಿಕ್ಕಿ ಹೊಡೆದಿರುವ ಭೀಕರ ಘಟನೆ ರಾಯಚೂರಿನಲ್ಲಿ ವರದಿಯಾಗಿದೆ.
ಜುಲೈ 18 ರಂದು ನಗರದ ರಾಘವೇಂದ್ರ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಅಪಘಾತದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದ್ವಿಚಕ್ರವಾಹನ ಸವಾರನೊಬ್ಬ ವಾಹನದಟ್ಟಣೆ ಇರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಟ್ರಾಫಿಕ್ ಅನ್ನು ನಿರ್ಲಕ್ಷಿಸಿ ದಿಢೀರ್ ಯೂ-ಟರ್ನ್ ಮಾಡಿದ್ದು, ವೇಗವಾಗಿ ಬಂದ ಕಾರು ಏಕಾಏಕಿ ಬೈಕ್ ಸವಾರನ ಮೇಲೆ ಮತ್ತು ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ 15 ಅಡಿ ಎತ್ತರಕ್ಕೆ ಹಾರಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ ಕೂಡಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆನ್ನಲಾಗಿದೆ.
''ಬೈಕ್ ಸವಾರ ಹಾಗೂ ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಇಬ್ಬರ ಲೈಸೆನ್ಸ್ ಕೂಡ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ'' ಎಂದು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.